ಪಣಜಿ: ದೆಹಲಿಯಿಂದ ಗೋವಾಕ್ಕೆ ತೆರಳುತ್ತಿದ್ದ ಇಂಡಿಗೋ ವಿಮಾನವೊಂದು ಟೇಕಾಫ್ ಆದ ಕೆಲವೇ ಕ್ಷಣಗಳಲ್ಲಿ ಎಂಜಿನ್‌ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಹಿನ್ನೆಲೆ ಮಂಗಳವಾರ (ಇಂದು) ಗೋವಾದ ಮನೋಹರ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತುರ್ತು ಲ್ಯಾಂಡಿಂಗ್ ಮಾಡಿದೆ.
ಗೋವಾದಿಂದ (Goa) ಟೇಕಾಫ್ ಆಗಿದ್ದ ವಿಮಾನದ ಒಂದು ಇಂಜಿನ್ ಕೆಲವೇ ಕ್ಷಣಗಳಲ್ಲಿ ಆಫ್ ಆಗಿದೆ. ತಕ್ಷಣ ಎಚ್ಚೆತ್ತ ಪೈಲಟ್ ಮತ್ತೆ ಗೋವಾಗೆ ಯೂಟರ್ನ್ ತೆಗೆದುಕೊಂಡಿದ್ದಾರೆ. ಇದರಿಂದ ಭಾರೀ ದುರಂತವೊಂದು ತಪ್ಪಿದಂತಾಗಿದೆ.
ಇಂಡಿಗೋ ವಿಮಾನ 6E 2102 ಟೇಕಾಫ್ ಆದ ಬಳಿಕ ತಾಂತ್ರಿಕ ಸಮಸ್ಯೆ ಪತ್ತೆಯಾದ ಹಿನ್ನೆಲೆ ಪೈಲಟ್‌ಗಳು ತಕ್ಷಣವೇ ಪ್ರಮಾಣಿತ ಕಾರ್ಯಾಚರಣಾ ಕ್ರಮವನ್ನು ಅನುಸರಿಸಿ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಬಳಿಕ ವಿಮಾನವನ್ನ ಹಿಂದಕ್ಕೆ ತಿರುಗಿಸಿ ಗೋವಾದ ಮೋಪಾ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಇಳಿಸಲಾಗಿದೆ.
ಈ ಕುರಿತು ಇಂಡಿಗೋ ಅಧಿಕೃತ ಹೇಳಿಕೆಯಲ್ಲಿ, `ಸೆಪ್ಟೆಂಬರ್ 1ರಂದು (ಇಂದು) ಉತ್ತರ ಗೋವಾದಿಂದ ದೆಹಲಿಗೆ ತೆರಳುತ್ತಿದ್ದ 6E 2102 ವಿಮಾನದಲ್ಲಿ ಟೇಕಾಫ್ ಆದ ಕೆಲವೇ ಕ್ಷಣಗಳಲ್ಲಿ ತಾಂತ್ರಿಕ ದೋಷ ಪತ್ತೆಯಾಗಿದೆ. ತಕ್ಷಣವೇ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ಬಂದಿದೆ. ಬಳಿಕ ಪೈಲಟ್‌ಗಳು ವಿಮಾನವನ್ನ ಹಿಂದಕ್ಕೆ ತಿರುಗಿಸಿ ಮನೋಹರ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಲ್ಯಾಂಡ್ ಮಾಡಿದ್ದಾರೆ ಎಂದು ತಿಳಿಸಿದೆ.
ಪ್ರಸ್ತುತ ವಿಮಾನವು ನಿರ್ವಹಣಾ ತಪಾಸಣೆಗೆ ಒಳಪಡಿಸಲಾಗಿದೆ. ಅಗತ್ಯವಿರುವ ಎಲ್ಲಾ ಅನುಮತಿಗಳನ್ನ ಪಡೆದ ಬಳಿಕ ವಿಮಾನ ಮತ್ತೆ ಕಾರ್ಯಾಚರಣೆ ಆರಂಭಿಸಲಿದೆ ಎಂದು ಇಂಡಿಗೋ ತಿಳಿಸಿದೆ.
ಪ್ರಯಾಣಿಕರಿಗೆ ಉಂಟಾದ ಅನಾನುಕೂಲತೆಗೆ ವಿಷಾದ ವ್ಯಕ್ತಪಡಿಸಿರುವ ವಿಮಾನಯಾನ ಸಂಸ್ಥೆ, ಪ್ರಯಾಣಿಕರಿಗೆ ಉಪಾಹಾರ ಸೇರಿದಂತೆ ಅಗತ್ಯ ನೆರವು ಒದಗಿಸಲಾಗಿದೆ ಮತ್ತು ಸಮಯೋಚಿತ ಮಾಹಿತಿಯನ್ನು ನೀಡಲಾಗಿದೆ. ಪ್ರಯಾಣಿಕರು ತಮ್ಮ ನಿಗದಿತ ಸ್ಥಾನ ತಲುಪಲು ಪರ್ಯಾಯ ವ್ಯವಸ್ಥೆಯನ್ನೂ ಮಾಡಲಾಗಿದೆ ಎಂದು ತಿಳಿಸಿದೆ.








