ಝಡ್ ಶ್ರೇಣಿಯ ಭದ್ರತೆ ಹೊಂದಿರುವ ಕೇಂದ್ರ ಸಚಿವ ಹಾಗೂ ಲೋಕ ಜನಶಕ್ತಿ ಪಾರ್ಟಿ (ರಾಮ್ ವಿಲಾಸ್) ಅಧ್ಯಕ್ಷ ಚಿರಾಗ್ ಪಾಸ್ವಾನ್ ಅವರಿಗೆ ಇಂದು (ಸೆಪ್ಟೆಂಬರ್ 1) ಅಂಚೆ ಮೂಲಕ ಬಂದ ಅನಾಮಧೇಯ ಪತ್ರವೊಂದರಲ್ಲಿ ‘ತೀವ್ರಗಾಮಿ ಉಗ್ರರು ಶೀಘ್ರದಲ್ಲೇ ನಿಮ್ಮನ್ನು ಕೊಲೆ ಮಾಡುತ್ತಾರೆ’ ಎಂದು ಜೀವ ಬೆದರಿಕೆ ಹಾಕಲಾಗಿದೆ. ಈ ಬೆದರಿಕೆ ಪತ್ರ ಬಂದ ತಕ್ಷಣ ಅದನ್ನು ಗಂಭೀರವಾಗಿ ಪರಿಗಣಿಸಿರುವ ಚಿರಾಗ್ ಪಾಸ್ವಾನ್ ಅವರ ಕಚೇರಿ ಕೇಂದ್ರ ಗೃಹ ಕಾರ್ಯದರ್ಶಿಯವರಿಗೆ ಪತ್ರ ಬರೆದಿದೆ. ಈ ಬೆದರಿಕೆ ಪತ್ರದ ಮೂಲ ಮತ್ತು ಸತ್ಯಾಸತ್ಯತೆಯನ್ನು ತುರ್ತಾಗಿ ತನಿಖೆ ಮಾಡುವಂತೆ ಹಾಗೂ ಸಚಿವರ ಭದ್ರತಾ ವ್ಯವಸ್ಥೆಯನ್ನು ಮರುಪರಿಶೀಲಿಸುವಂತೆ ಕೋರಿದೆ.
ಕೇಂದ್ರ ಗೃಹ ಕಾರ್ಯದರ್ಶಿಯವರಿಗೆ ಬರೆದಿರುವ ಪತ್ರದಲ್ಲಿ ಚಿರಾಗ್ ಪಾಸ್ವಾನ್ ಅವರ ಹೆಚ್ಚುವರಿ ವೈಯಕ್ತಿಕ ಕಾರ್ಯದರ್ಶಿ ಆಲೋಕ್ ಕುಮಾರ್, “ಕೇಂದ್ರ ಗೃಹ ಸಚಿವಾಲಯದಿಂದ ಝಡ್ ಶ್ರೇಣಿಯ ಭದ್ರತೆ ಪಡೆಯುತ್ತಿರುವ ಕೇಂದ್ರ ಆಹಾರ ಸಂಸ್ಕರಣಾ ಉದ್ಯಮಗಳ ಸಚಿವರ ವೈಯಕ್ತಿಕ ಭದ್ರತೆಗೆ ಸಂಬಂಧಿಸಿದ ಗಂಭೀರ ವಿಚಾರವನ್ನು ನಿಮ್ಮ ತುರ್ತು ಗಮನಕ್ಕೆ ತರಲು ನನಗೆ ನಿರ್ದೇಶಿಸಲಾಗಿದೆ” ಎಂದು ಉಲ್ಲೇಖಿಸಿದ್ದಾರೆ.
ಪತ್ರದ ಪ್ರಕಾರ, 2 ಮೊಬೈಲ್ ಸಂಖ್ಯೆಗಳನ್ನು ಒಳಗೊಂಡ ಅನಾಮಧೇಯ ಪತ್ರವೊಂದು ಇಂದು ಸಚಿವಾಲಯಕ್ಕೆ ತಲುಪಿದೆ. “ಅದನ್ನು ತೆರೆದು ನೋಡಿದಾಗ, ಅದರಲ್ಲಿ ಕೇಂದ್ರ ಸಚಿವರ ಜೀವಕ್ಕೆ ನೇರ ಬೆದರಿಕೆ ಹಾಕಿರುವುದು ಕಂಡುಬಂದಿದೆ. ಆ ಬೆದರಿಕೆಯಲ್ಲಿ ‘ತೀವ್ರಗಾಮಿ ಉಗ್ರರಿಂದ ಶೀಘ್ರದಲ್ಲೇ ನಿಮ್ಮ ಹತ್ಯೆಯಾಗಲಿದೆ’ ಎಂದು ಬರೆಯಲಾಗಿದೆ” ಎಂದು ಆಲೋಕ್ ಕುಮಾರ್ ತಿಳಿಸಿದ್ದಾರೆ. ಪರಿಶೀಲನೆಗಾಗಿ ಮೂಲ ಬೆದರಿಕೆ ಪತ್ರವನ್ನೂ ಗೃಹ ಸಚಿವಾಲಯದ ಪತ್ರದೊಂದಿಗೆ ಲಗತ್ತಿಸಲಾಗಿದೆ.
ಸಚಿವರ ಭದ್ರತೆ ಹೆಚ್ಚಿಸಲು ಆಗ್ರಹ:
ಬೆದರಿಕೆ ಪತ್ರದ ಮೂಲ, ಸತ್ಯಾಸತ್ಯತೆ ಮತ್ತು ಅದರ ಹಿನ್ನೆಲೆಯನ್ನು ಯಾವುದೇ ವಿಳಂಬವಿಲ್ಲದೆ ಕೂಲಂಕಷವಾಗಿ ತನಿಖೆ ನಡೆಸಬೇಕೆಂದು ಚಿರಾಗ್ ಪಾಸ್ವಾನ್ ಕಚೇರಿಯು ಗೃಹ ಕಾರ್ಯದರ್ಶಿಯವರನ್ನು ಆಗ್ರಹಿಸಿದೆ. ಚಿರಾಗ್ ಪಾಸ್ವಾನ್ ಅವರ ಸಾರ್ವಜನಿಕ ಕಾರ್ಯಕ್ರಮಗಳು ಮತ್ತು ಬೆದರಿಕೆಯ ತೀವ್ರತೆಯನ್ನು ಪರಿಗಣಿಸಿ, ಅವರ ಪ್ರಸ್ತುತ ಭದ್ರತೆಯನ್ನು ಪರಿಶೀಲಿಸಬೇಕು ಮತ್ತು ಅಗತ್ಯವಿದ್ದರೆ ಭದ್ರತೆಯನ್ನು ಮತ್ತಷ್ಟು ಬಿಗಿಗೊಳಿಸಬೇಕು ಎಂದು ಕಚೇರಿ ವಿನಂತಿಸಿದೆ.
ಬಿಹಾರದ ರಾಜಕೀಯದ ಪ್ರಮುಖ ನಾಯಕರಾಗಿರುವ ಚಿರಾಗ್ ಪಾಸ್ವಾನ್ ಅವರಿಗೆ ಬೆದರಿಕೆ ಬಂದಿರುವುದನ್ನು ಎಲ್‌ಜೆಪಿ ಕಾರ್ಯಕರ್ತರು ತೀವ್ರವಾಗಿ ಖಂಡಿಸಿದ್ದು, ತಪ್ಪಿತಸ್ಥರ ವಿರುದ್ಧ ತಕ್ಷಣವೇ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.








