ಬೆಂಗಳೂರು: ಸ್ಯಾಂಡಲ್‌ವುಡ್ ನಟ ‘ದುನಿಯಾ’ ವಿಜಯ್ ಅವರ ಪುತ್ರ ಸಾಮ್ರಾಟ್ ವಿರುದ್ಧ ಹಲ್ಲೆ ಹಾಗೂ ಅಪಹರಣ ಆರೋಪ ಕೇಳಿಬಂದಿದೆ. ಕಾರು ಓವರ್‌ಟೇಕ್ ಮಾಡಿದ ವಿಚಾರಕ್ಕೆ ಸಂಬಂಧಿಸಿದಂತೆ ತನ್ನ ಸಹಪಾಠಿಯನ್ನೇ ಕಾರಿನಲ್ಲಿ ಎಳೆದೊಯ್ದು ಹಲ್ಲೆ ನಡೆಸಲಾಗಿದೆ ಎಂದು ಆರೋಪಿಸಲಾಗಿದೆ. ಘಟನೆಯಲ್ಲಿ ಗಾಯಗೊಂಡ ಮನೀಶ್ ಗೌಡ ಎಂಬ ಯುವಕ ಪ್ರಸ್ತುತ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಕೆಂಗೇರಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ನಿನ್ನೆ ಸಂಜೆ ನಟ ವಿಜಯ್ ಪುತ್ರ ಸಾಮ್ರಾಟ್ ಹಾಗೂ ಆತನ ಸ್ನೇಹಿತರು ಜಿಪ್ಸಿ ಕಾರಿನಲ್ಲಿ ತೆರಳುತ್ತಿದ್ದರು. ಈ ವೇಳೆ ರಾಜರಾಜೇಶ್ವರಿನಗರದಲ್ಲಿ ಮನೀಶ್ ಗೌಡ ಮತ್ತು ಆತನ ಸ್ನೇಹಿತರು ತಮ್ಮ ಐ20 ಕಾರಿನಲ್ಲಿ ಸಾಮ್ರಾಟ್ ಚಲಾಯಿಸುತ್ತಿದ್ದ ಕಾರನ್ನು ಓವರ್‌ಟೇಕ್ ಮಾಡಿದ್ದರು. ಈ ವಿಚಾರಕ್ಕೆ ಇಬ್ಬರ ನಡುವೆ ಸಣ್ಣ ಗಲಾಟೆಯಾಗಿತ್ತು.
ನಿನ್ನೆಯ ಗಲಾಟೆಯ ಹಿನ್ನೆಲೆಯಲ್ಲಿ, ಇಂದು ಮಧ್ಯಾಹ್ನ ಮೈಸೂರು ರಸ್ತೆಯ ಆರ್‌ವಿ ಯೂನಿವರ್ಸಿಟಿ ಹೊರಭಾಗದಲ್ಲಿದ್ದ ಮನೀಶ್ ಗೌಡನನ್ನು ಸಾಮ್ರಾಟ್ ಹಾಗೂ ಆತನ ಕಡೆಯವರು ಬಲವಂತವಾಗಿ ಕಾರಿನಲ್ಲಿ ಎಳೆದೊಯ್ದು ತೀವ್ರವಾಗಿ ಹಲ್ಲೆ ನಡೆಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಹಲ್ಲೆಗೊಳಗಾದ ಮನೀಶ್ ಗೌಡ ಹಾಗೂ ಆರೋಪ ಎದುರಿಸುತ್ತಿರುವ ಸಾಮ್ರಾಟ್ ಇಬ್ಬರೂ ಒಂದೇ ಕಾಲೇಜಿನ ವಿದ್ಯಾರ್ಥಿಗಳಾಗಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಕೆಂಗೇರಿ ಪೊಲೀಸ್ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೆತ್ತಿಕೊಂಡಿದ್ದಾರೆ.
‘ಸಾಫಾರಿ ಕಾರಿನಲ್ಲಿ ಬಂದು ಮನೀಶ್ ಕಿಡ್ನ್ಯಾಪ್ ಮಾಡಿ ಹೊಡೆದಿದ್ದಾರೆ’
ನಟ ‘ದುನಿಯಾ’ ವಿಜಯ್ ಪುತ್ರ ಸಾಮ್ರಾಟ್ ವಿಜಯ್ ಹಾಗೂ ಆತನ ತಂಡವು ಸಹಪಾಠಿ ಮನೀಶ್ ಗೌಡ ಎಂಬ ಯುವಕನನ್ನು ಕಾರಿನಲ್ಲಿ ಅಪಹರಿಸಿ ತೀವ್ರವಾಗಿ ಹಲ್ಲೆ ನಡೆಸಿದೆ ಎಂದು ಮನೀಶ್ ಪರ ವಕೀಲ ಮಂಜುನಾಥ್ ಗಂಭೀರ ಆರೋಪ ಮಾಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಸಾಮ್ರಾಟ್ ವಿಜಯ್‌ನನ್ನು ಎ-1 (A-1) ಆರೋಪಿಯನ್ನಾಗಿ ಮಾಡಿ ಒಟ್ಟು 6 ಜನರ ವಿರುದ್ಧ ಕೆಂಗೇರಿ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ ಎಂದು ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
“ನಿನ್ನೆ ಕಾರು ಓವರ್‌ಟೇಕ್ ಮಾಡಿದ ಸಣ್ಣ ವಿಚಾರಕ್ಕೆ ಗಲಾಟೆ ನಡೆದಿತ್ತು. ಆದರೆ ಇವತ್ತು ಸಾಮ್ರಾಟ್ ಹಾಗೂ ಆತನ ಕಡೆಯವರು ಸಫಾರಿ ಕಾರಿನಲ್ಲಿ ಬಂದು ಮನೀಶ್‌ನನ್ನು ಅಪಹರಿಸಿದ್ದಾರೆ. ತದನಂತರ ಆರು ಜನರು ಸೇರಿಕೊಂಡು ಆತನ ಮೇಲೆ ತೀವ್ರವಾಗಿ ಹಲ್ಲೆ ನಡೆಸಿದ್ದಾರೆ” ಎಂದು ವಕೀಲರು ತಿಳಿಸಿದ್ದಾರೆ. “ನಾವು ನೀಡಿದ ದೂರಿನಲ್ಲಿ ನಟ ದುನಿಯಾ ವಿಜಯ್ ಪುತ್ರ ಸಾಮ್ರಾಟ್ ವಿಜಯ್‌ನನ್ನು ಎ-1 (ಮೊದಲ ಆರೋಪಿ) ಎಂದು ಹೆಸರಿಸಿದ್ದೇವೆ. ಆತನ ಜೊತೆಗಿದ್ದ ಇತರ ಆರು ಜನರ ವಿರುದ್ಧವೂ ದೂರು ನೀಡಲಾಗಿದೆ” ಎಂದು ವಿವರಿಸಿದ್ದಾರೆ.
“ಘಟನೆ ನಡೆದ ಸ್ಥಳಕ್ಕೆ ಸಂಬಂಧಿಸಿದಂತೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೆಲ ಗೊಂದಲಗಳಿವೆ. ಆದಾಗ್ಯೂ, ಪೊಲೀಸರು ಸೂಕ್ತ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಳ್ಳುವ ಭರವಸೆ ನೀಡಿದ್ದಾರೆ” ಎಂದು ವಕೀಲ ಮಂಜುನಾಥ್ ಹೇಳಿದ್ದಾರೆ.








