ಕೌಶಂಬಿ: ಉತ್ತರಪ್ರದೇಶದ ಕೌಶಂಬಿ ಜಿಲ್ಲೆಯಲ್ಲಿ ಮಂಗಳವಾರ ಕರ್ತವ್ಯದಲ್ಲಿದ್ದ ಮಹಿಳಾ ಕಾನ್ಸ್ಟೇಬಲ್ ತಮ್ಮ ಸೇವಾ ರೈಫಲ್ನಿಂದ ಸಿಡಿದ ಗುಂಡು ತಗುಲಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತರನ್ನು ಗಾಜಿಪುರ ಜಿಲ್ಲೆಯ ಪ್ರಿಯಾಂಕಾ ಯಾದವ್ (25) ಎಂದು ಗುರುತಿಸಲಾಗಿದೆ.
ಇವರು ಮಂಜನ್ಪುರದ ಮಹಿಳಾ ಠಾಣೆಯಲ್ಲಿ ನಿಯೋಜಿತರಾಗಿದ್ದರು.
ಘಟನೆ ನಡೆದ ತತ್ಕ್ಷಣ ಸಹೋದ್ಯೋಗಿಗಳು ಅವರನ್ನು ಜಿಲ್ಲಾ ಆಸ್ಪತ್ರೆಗೆ ಕರೆದೊಯ್ದರು. ಆದರೆ, ವೈದ್ಯರು ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಿದರು ಎಂದು ಪೊಲೀಸ್ ಅಧೀಕ್ಷಕ ಸತ್ಯನಾರಾಯಣ ಪ್ರಜಾಪತ್ ತಿಳಿಸಿದ್ದಾರೆ.
”2025ರ ಬ್ಯಾಚ್ನ ಮಹಿಳಾ ಕಾನ್ಸ್ಟೇಬಲ್ ಪ್ರಿಯಾಂಕಾ ಯಾದವ್ ಮಂಗಳವಾರ ಬೆಳಿಗ್ಗೆ ಮಹಿಳಾ ಪೊಲೀಸ್ ಠಾಣೆಯಲ್ಲಿ ಕಾವಲು ಕರ್ತವ್ಯದಲ್ಲಿದ್ದಾಗ ಈ ಘಟನೆ ನಡೆದಿದೆ” ಎಂದು ಪ್ರಜಾಪತ್ ತಿಳಿಸಿದ್ದಾರೆ.
ಮಾಹಿತಿ ತಿಳಿದ ತತ್ಕ್ಷಣ ಎಸ್ಪಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಅಮಿತ್ ಸಿಂಗ್ ಹಾಗೂ ಇತರ ಹಿರಿಯ ಅಧಿಕಾರಿಗಳು ಆಸ್ಪತ್ರೆಗೆ ತಲುಪಿದರು. ಅನಂತರ ಪೊಲೀಸ್ ಠಾಣೆಯ ಘಟನಾ ಸ್ಥಳವನ್ನು ಪರಿಶೀಲಿಸಿದರು.
ಈ ಘಟನೆಯನ್ನು ಎಲ್ಲಾ ಆಯಾಮಗಳಿಂದ ತನಿಖೆ ನಡೆಸಲು ಮಂಜನ್ಪುರ ಸರ್ಕಲ್ ಅಧಿಕಾರಿ ನೇತೃತ್ವದಲ್ಲಿ ಪೊಲೀಸ್ ತಂಡ ರಚಿಸಲಾಗಿದೆ. ವಿವರವಾದ ವರದಿ ಸಿದ್ಧಪಡಿಸುವ ಮುನ್ನ ತನಿಖಾ ತಂಡ ಸಿಸಿಟಿವಿ ದೃಶ್ಯಾವಳಿಯನ್ನು ಪರಿಶೀಲಿಸಲಿದ್ದು, ಸಾಕ್ಷಿಗಳ ಹೇಳಿಕೆಗಳನ್ನು ದಾಖಲಿಸಿಕೊಳ್ಳಲಿದೆ ಎಂದು ಎಸ್ಪಿ ತಿಳಿಸಿದ್ದಾರೆ.
ತನಿಖಾ ವರದಿ ಬಂದ ನಂತರವೇ ಸಾವಿನ ನಿಖರ ಕಾರಣ ತಿಳಿಯಲಿದೆ ಎಂದು ಅವರು ಹೇಳಿದ್ದಾರೆ.








