ಕರ್ಧಾನಿ ಪೊಲೀಸ್ ಠಾಣಾ ವ್ಯಾಪ್ತಿಯ ಗೋವಿಂದಪುರದಲ್ಲಿ (ಗೋವಿಂದ್ ವಾಟಿಕಾ) ರಾಹುಲ್ ಝಾ ಎಂಬ ವ್ಯಕ್ತಿಯು ಗಾಢ ನಿದ್ದೆಯಲ್ಲಿದ್ದ ತನ್ನ ಪತ್ನಿ ಮತ್ತು ಮೂವರು ಯುವತಿ ಹೆಣ್ಣುಮಕ್ಕಳ ತಲೆಗೆ ಇಟ್ಟಿಯಿಂದ ಹೊಡೆದು ಅತ್ಯಂತ ಕ್ರೂರವಾಗಿ ಕೊಂದಿದ್ದಾನೆ. ಕೃತ್ಯ ಎಸಗಿದ ಬಳಿಕ ಆರೋಪಿ ಸ್ಥಳದಿಂದ ಪರಾರಿಯಾಗಿದ್ದು, ಪೊಲೀಸರು ಶೋಧ ಕಾರ್ಯಾಚರಣೆ ತೀವ್ರಗೊಳಿಸಿದ್ದಾರೆ.
ದಾಳಿಯಲ್ಲಿ ಗೀತಾ ಝಾ (40) ಹಾಗೂ ಆಕೆಯ ಪುತ್ರಿಯರಾದ ನಂದಿನಿ, ಗಿರಿಜಾ ಮತ್ತು ರಾಧಿಕಾ (17 ರಿಂದ 23 ವರ್ಷ ವಯಸ್ಸಿನವರು) ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಮಧ್ಯರಾತ್ರಿ ಅಥವಾ ನಸುಕಿನ ಜಾವ ಕುಟುಂಬದ ಸದಸ್ಯರು ಗಾಢ ನಿದ್ದೆಯಲ್ಲಿದ್ದ ಸಮಯವನ್ನು ಬಳಸಿಕೊಂಡ ರಾಹುಲ್ ಝಾ, ಇಟ್ಟಿಗೆ ಹಾಗೂ ಭಾರವಾದ ಸಿಮೆಂಟ್ ಕಲ್ಲಿನಿಂದ ಎಲ್ಲರ ತಲೆಗಳ ಮೇಲೂ ಸತತವಾಗಿ ಬಲವಾಗಿ ಹೊಡೆದಿದ್ದಾನೆ.
ಬೆಳಗ್ಗೆ ಹಾಲು ಪಡೆದು ಎಸ್ಕೇಪ್: ಕೊಲೆ ಮಾಡಿದ ನಂತರವೂ ಮನೆಯೊಳಗೇ ಇದ್ದ ಆರೋಪಿ, ಬೆಳಗ್ಗೆ 7 ಗಂಟೆ ಸುಮಾರಿಗೆ ಮನೆ ಬಾಗಿಲಿಗೆ ಬಂದ ಹಾಲಿನವನಿಂದ ಹಾಲು ಪಡೆದುಕೊಂಡಿದ್ದಾನೆ, ನಂತರ ಮನೆಯ ರಕ್ತದ ಕಲೆಗಳನ್ನು ಬಟ್ಟೆಯಿಂದ ಒರೆಸಿ ಮುಚ್ಚಿಡಲು ಯತ್ನಿಸಿ ಪರಾರಿಯಾಗಿದ್ದಾನೆ.
ಬೆಳಗ್ಗೆ 10 ಗಂಟೆಯಾದರೂ ಮನೆಯ ಬಾಗಿಲು ತೆರೆಯದಿದ್ದಾಗ ಅಕ್ಕಪಕ್ಕದವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಬಾಗಿಲು ಮುರಿದು ಒಳನುಗ್ಗಿದಾಗ ಆರೋಪಿಯ 85 ವರ್ಷದ ತಂದೆ ಲಕ್ಷ್ಮೀನಾಥ್ ಝಾ ಮಾತ್ರ ಬದುಕುಳಿದಿರುವುದು ಕಂಡುಬಂದಿದೆ.
ಕೌಟುಂಬಿಕ ಕಲಹದ ಶಂಕೆ: ಪ್ರಾಥಮಿಕ ತನಿಖೆಯ ಪ್ರಕಾರ, ಕುಟುಂಬದಲ್ಲಿ ನಡೆಯುತ್ತಿದ್ದ ತೀವ್ರ ಕಲಹ ಮತ್ತು ಮನಸ್ತಾಪವೇ ಈ ಘೋರ ಹತ್ಯೆಗೆ ಕಾರಣ ಎಂದು ಪಶ್ಚಿಮ ಡಿಸಿಪಿ ಪ್ರಶಾಂತ್ ಕಿರಣ್ ತಿಳಿಸಿದ್ದಾರೆ. ಕೃತ್ಯಕ್ಕೆ ನಿಖರ ಕಾರಣವೇನು ಎಂಬುದನ್ನು ತಿಳಿಯಲು ಕುಟುಂಬಸ್ಥರನ್ನು ವಿಚಾರಣೆ ನಡೆಸಲಾಗುತ್ತಿದೆ.ವಿಧಿವಿಜ್ಞಾನ ಪ್ರಯೋಗಾಲಯ (FSL) ತಜ್ಞರು ಮತ್ತು ಶ್ವಾನದಳ ಸ್ಥಳಕ್ಕೆ ಆಗಮಿಸಿ ರಕ್ತದ ಮಾದರಿಗಳನ್ನು ಹಾಗೂ ಕೊಲೆಗೆ ಬಳಸಲಾದ ಇಟ್ಟಿಗೆಯನ್ನು ವಶಕ್ಕೆ ಪಡೆದಿದ್ದಾರೆ.
ರಾಜ್ಯಾದ್ಯಂತ ತಪಾಸಣೆ ತೀವ್ರ: ಪರಾರಿಯಾಗಿರುವ ರಾಹುಲ್ ಝಾ ಬಂಧನಕ್ಕಾಗಿ ಹಲವು ವಿಶೇಷ ಪೊಲೀಸ್ ತಂಡಗಳನ್ನು ರಚಿಸಲಾಗಿದ್ದು, ನಗರದ ಎಲ್ಲಾ ಪ್ರವೇಶ ಮತ್ತು ನಿರ್ಗಮನ ಚೆಕ್‌ಪೋಸ್ಟ್‌ಗಳಲ್ಲಿ ತಪಾಸಣೆ ತೀವ್ರಗೊಳಿಸಲಾಗಿದೆ. ಆರೋಪಿ ಅಡಗಿರುವ ಶಂಕಿತ ಸ್ಥಳಗಳ ಮೇಲೆ ಪೊಲೀಸರು ನಿರಂತರ ದಾಳಿ ನಡೆಸುತ್ತಿದ್ದಾರೆ.








