ಬೆಳ್ತಂಗಡಿ: ಮಾನಸಿಕ ಖಿನ್ನತೆಗೆ ಚಿಕಿತ್ಸೆ ಪಡೆಯುತ್ತಿದ್ದ ಯುವತಿಯೊಬ್ಬಳು ಜೀವನದಲ್ಲಿ ಜಿಗುಪ್ಸೆಗೊಂಡು ಮನೆಯೆದುರಿನ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಬೆಳ್ತಂಗಡಿ ತಾಲೂಕಿನ ಪುದುವೆಟ್ಟು ಗ್ರಾಮದ ಮಿಯಾರು ಸಾಮೆದಕಲಪು ಎಂಬಲ್ಲಿ ನಡೆದಿದೆ.
ಖಾಸಗಿ ಕಾಲೇಜಿನ ಸಿಬ್ಬಂದಿ, ಪುದುವೆಟ್ಟು ಗ್ರಾಮದ ಕಲ್ಲಂಡ ಮನೆ ನಿವಾಸಿ ಅಣ್ಣಿ ಗೌಡ ಅವರ ಮಗಳು ಲಿಶ್ಮಿತಾ ಕೆ. (20) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ಮೃತ ಲಿಶ್ಮಿತಾ ಕೆ. ಅವರು ಬೆಳ್ತಂಗಡಿ ತಾಲೂಕಿನ ನಡ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಗುತ್ತಿಗೆ ಆಧಾರದ ಮೇಲೆ ಗುಮಾಸ್ತೆಯಾಗಿ ಕೆಲಸ ನಿರ್ವಹಿಸುತ್ತಿದ್ದರು. ಕಳೆದ ಸುಮಾರು ಒಂದು ವರ್ಷದಿಂದ ಅವರು ತೀವ್ರ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದು, ವೈದ್ಯಕೀಯ ಚಿಕಿತ್ಸೆಯನ್ನೂ ಪಡೆಯುತ್ತಿದ್ದರು. ಸೆಪ್ಟೆಂಬರ್ 9ರಂದು ಸಂಜೆ 5:45 ರಿಂದ ರಾತ್ರಿ 7:30 ರ ಮಧ್ಯದ ಅವಧಿಯಲ್ಲಿ, ಖಿನ್ನತೆಯಿಂದಾಗಿ ಜೀವನದಲ್ಲಿ ಜಿಗುಪ್ಸೆಗೊಂಡ ಲಿಶ್ಮಿತಾ ತಮ್ಮ ಮನೆಯೆದುರಿಗಿದ್ದ ಬಾವಿಗೆ ಹಾರಿದ್ದಾರೆ. ಇದರಿಂದಾಗಿ ಅವರು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ
ಮಗಳ ಸಾವಿನ ಕುರಿತು ತಂದೆ ಅಣ್ಣಿ ಗೌಡ (60) ನೀಡಿದ ದೂರಿನಂತೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.








