ನವದೆಹಲಿ: ಭಾರಿ ಚರ್ಚೆಗೆ ಗ್ರಾಸವಾಗಿರುವ ₹5 ಕೋಟಿ ಚೆಕ್ ಬೌನ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟ ರಾಜ್‌ಪಾಲ್ ಯಾದವ್ಅವರನ್ನು ಸುಪ್ರೀಂ ಕೋರ್ಟ್ ಮಂಗಳವಾರ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ. “ನೀವು ಸಿನಿಮಾದಲ್ಲಿ ಮಾತ್ರವಲ್ಲ, ನ್ಯಾಯಾಲಯದಲ್ಲೂ ನಾಟಕ ಮಾಡುವುದರಲ್ಲಿ ಪರಿಪೂರ್ಣರು” ಎಂದು ಪೀಠವು ಖಾರವಾಗಿ ಟೀಕಿಸಿದೆ.
ಮುರಳಿ ಪ್ರೊಡಕ್ಷನ್ಸ್ ಮಾಲೀಕರಿಂದ ಪಡೆದಿದ್ದ ಸಾಲದ ಬಾಕಿ ಮರುಪಾವತಿ ಮಾಡದ ಹಿನ್ನೆಲೆಯಲ್ಲಿ ನಟ ರಾಜ್‌ಪಾಲ್ ಯಾದವ್ ಪ್ರಸ್ತುತ ಕಾನೂನು ಸಂಕಷ್ಟ ಎದುರಿಸುತ್ತಿದ್ದು, ಜಾಮೀನಿನ ಮೇಲೆ ಹೊರಗಿದ್ದಾರೆ.
ಸದರಿ ಪ್ರಕರಣದ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ನೇತೃತ್ವದ ಸುಪ್ರೀಂ ಕೋರ್ಟ್ ಪೀಠವು, ನಟ ರಾಜ್‌ಪಾಲ್ ಯಾದವ್ ಅವರಿಗೆ ಮುಂದಿನ ಎರಡು ವಾರಗಳ ಒಳಗಾಗಿ ಸುಪ್ರೀಂ ಕೋರ್ಟ್ ರಿಜಿಸ್ಟ್ರಿಯಲ್ಲಿ ಕನಿಷ್ಠ ₹2 ಕೋಟಿ ರೂಪಾಯಿ ಠೇವಣಿ ಇಡುವಂತೆ ಕಟ್ಟಪ್ಪಣೆ ಮಾಡಿದೆ.
ವಿಚಾರಣೆ ವೇಳೆ ನಟನ ನಡವಳಿಕೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಪೀಠ, “ಅವರ ಹಿಂದಿನ ನಡವಳಿಕೆಯನ್ನು ನೋಡಿದರೆ ಯಾರಾದರೂ ಅವರನ್ನು ಹೇಗೆ ನಂಬಲು ಸಾಧ್ಯ? ಅವರು ಬಾಲಿವುಡ್‌ನಲ್ಲಿ ನಾಟಕ ಮತ್ತು ನಟನೆಯಲ್ಲಿ ಪರಿಪೂರ್ಣರು, ಇಲ್ಲಿ ನ್ಯಾಯಾಲಯದ ಮುಂಭಾಗದಲ್ಲೂ ಅದನ್ನೇ ಮಾಡುತ್ತಿದ್ದಾರೆ” ಎಂದು ಕಿಡಿಕಾರಿತು. ದೂರುದಾರರ ಪ್ರಕಾರ, ರಾಜ್‌ಪಾಲ್ ಯಾದವ್ ಅವರು 2010 ರಲ್ಲಿ ಸಿನಿಮಾವೊಂದರ ನಿರ್ಮಾಣಕ್ಕಾಗಿ ₹5 ಕೋಟಿ ಸಾಲ ಪಡೆದಿದ್ದರು. ಅದನ್ನು ಮರುಪಾವತಿಸಲು 2013 ರಲ್ಲಿ ತಲಾ ₹1.05 ಕೋಟಿ ಮೌಲ್ಯದ ಏಳು ಚೆಕ್‌ಗಳನ್ನು ನೀಡಿದ್ದು, ಅವೆಲ್ಲವೂ ಬೌನ್ಸ್ ಆಗಿದ್ದವು.
ನಂತರ 2012 ರಲ್ಲಿ ನಡೆದ ಒಪ್ಪಂದದಂತೆ ಯಾದವ್, ಅವರ ಪತ್ನಿ ಹಾಗೂ ಅವರ ಕಂಪನಿಯು ಬಡ್ಡಿ ಸೇರಿ ಒಟ್ಟು ₹11 ಕೋಟಿ ಪಾವತಿಸಲು ಒಪ್ಪಿಕೊಂಡಿದ್ದರು. ಆದರೆ ಮಾತು ತಪ್ಪಿದ ಹಿನ್ನೆಲೆಯಲ್ಲಿ ಮುರಳಿ ಪ್ರೊಡಕ್ಷನ್ಸ್ ಮಾಲೀಕರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ನ್ಯಾಯಾಲಯದಲ್ಲಿ ನಟನ ಪರ ವಕೀಲರು ಮಾತನಾಡಿ, ನಿಗದಿತ ಗಡುವಿನೊಳಗೆ ರಾಜ್‌ಪಾಲ್ ಯಾದವ್ ಅವರು ಕನಿಷ್ಠ ₹2 ಕೋಟಿ ಠೇವಣಿ ಇಡಲಿದ್ದಾರೆ ಹಾಗೂ ಬಾಕಿ ಮೊತ್ತಕ್ಕೆ ಶ್ಯೂರಿಟಿ ನೀಡಲಿದ್ದಾರೆ ಎಂದು ಪೀಠಕ್ಕೆ ಭರವಸೆ ನೀಡಿದರು. ವಕೀಲರ ಮನವಿಯನ್ನು ಪುರಸ್ಕರಿಸಿದ ನ್ಯಾಯಪೀಠವು ನಟನಿಗೆ 2 ವಾರಗಳ ಕಾಲಾವಕಾಶ ನೀಡಿ, ವಿಚಾರಣೆಯನ್ನು ಅಕ್ಟೋಬರ್ 5ಕ್ಕೆ ಮುಂದೂಡಿದೆ. ಜೊತೆಗೆ ಅಲ್ಲಿಯವರೆಗೆ ನಟನಿಗೆ ಬಂಧನದಿಂದ ಮಧ್ಯಂತರ ವಿನಾಯಿತಿ ನೀಡಿದೆ.








