ಮೂಡಿಗೆರೆ: ಮಂಗಳೂರು-ಚಿಕ್ಕಮಗಳೂರು ಸಂಪರ್ಕಿಸುವ ಚಾರ್ಮಾಡಿ ಘಾಟಿಯಲ್ಲಿ ತಡರಾತ್ರಿ ಲಾರಿಯೊಂದರ ಮೇಲೆ ಪುಂಡರ ಗುಂಪೊಂದು ಕಲ್ಲು ತೂರಾಟ ನಡೆಸಿದೆ. ಶುಕ್ರವಾರ ಬೆಳಗಿನ ಜಾವ ಸುಮಾರು 4 ಗಂಟೆಯ ವೇಳೆಗೆ ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟಿಯ ಪ್ರಸಿದ್ಧ ಅಣ್ಣಪ್ಪ ಸ್ವಾಮಿ ದೇಗುಲದ ಬಳಿ ಈ ಆತಂಕಕಾರಿ ಘಟನೆ ಸಂಭವಿಸಿದೆ.
ಚಿಕ್ಕಮಗಳೂರು ಕಡೆಯಿಂದ ಮಂಗಳೂರಿನತ್ತ ಚಲಿಸುತ್ತಿದ್ದ ಮಂಗಳೂರು ಮೂಲದ ಲಾರಿಗೆ ನಾಲ್ವರು ಯುವಕರು ಕೈ ಅಡ್ಡಹಾಕಿ ನಿಲ್ಲಿಸುವಂತೆ ಸನ್ನೆ ಮಾಡಿದ್ದಾರೆ. ತಡರಾತ್ರಿಯಾದ್ದರಿಂದ ಅಪಾಯವನ್ನು ಶಂಕಿಸಿದ ಲಾರಿ ಚಾಲಕ ವಾಹನವನ್ನು ನಿಲ್ಲಿಸದೆ ಮುನ್ನಡೆದಿದ್ದಾರೆ. ಇದರಿಂದ ಕೆರಳಿದ ಯುವಕರು ಲಾರಿಯ ಮೇಲೆ ಮನಸೋಇಚ್ಛೆ ಕಲ್ಲು ತೂರಾಟ ನಡೆಸಿ ಪುಂಡಾಟಿಕೆ ಮೆರೆದಿದ್ದಾರೆ.
ಕಲ್ಲು ತೂರಾಟ ನಡೆಸಿದ ನಾಲ್ವರೂ ಯುವಕರು ಗಾಂಜಾ ಸೇವಿಸಿದ್ದರೆಂಬ ಬಲವಾದ ಶಂಕೆ ವ್ಯಕ್ತವಾಗಿದೆ. ಗಾಂಜಾ ಅಮಲಿನಲ್ಲಿಯೇ ಈ ಕೃತ್ಯ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ. ಘಟನೆಯ ಕುರಿತು ಮಾಹಿತಿ ತಿಳಿಯುತ್ತಿದ್ದಂತೆಯೇ ತಕ್ಷಣವೇ ಸ್ಥಳಕ್ಕೆ ಧಾವಿಸಿದ ಬಣಕಲ್ ಠಾಣೆ ಪೊಲೀಸರು, ಕಲ್ಲು ತೂರಾಟ ನಡೆಸಿದ ನಾಲ್ವರನ್ನು ವಶಕ್ಕೆ ಪಡೆದಿದ್ದಾರೆ. ಆರೋಪಿಗಳನ್ನು ವೈದ್ಯಕೀಯ ತಪಾಸಣೆಗೆ (Medical Test) ಒಳಪಡಿಸಲಾಗಿದ್ದು, ಈ ಸಂಬಂಧ ಬಣಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಾಟಿಯಲ್ಲಿ ರಾತ್ರಿ ವೇಳೆ ಸಂಚರಿಸುವ ವಾಹನ ಚಾಲಕರು ಜಾಗರೂಕರಾಗಿರುವಂತೆ ಪೊಲೀಸರು ಸೂಚಿಸಿದ್ದಾರೆ.








