ಕಣ್ಣೂರು : ಕೇರಳದ ಕಣ್ಣೂರಿನಲ್ಲಿರುವ ಅತ್ಯಂತ ಸೂಕ್ಷ್ಮ ಹಾಗೂ ಆಯಕಟ್ಟಿನ ಎಝಿಮಲ ನೌಕಾ ಅಕಾಡೆಮಿಯಲ್ಲಿ ನಕಲಿ ಭಾರತೀಯ ಗುರುತಿನ ಚೀಟಿ ಬಳಸಿ ಕಾಂಟ್ರಾಕ್ಟ್ ಆಧಾರದಲ್ಲಿ ಕೆಲಸ ಮಾಡುತ್ತಿದ್ದ 32 ವರ್ಷದ ಬಾಂಗ್ಲಾದೇಶಿ ಪ್ರಜೆಯನ್ನು ಶುಕ್ರವಾರ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ವ್ಯಕ್ತಿಯನ್ನು ಬಿಪ್ಲೊಬ್ ಸೊರೇನ್ (32) ಎಂದು ಗುರುತಿಸಲಾಗಿದ್ದು, ಈತ ತನ್ನ ನೈಜ ಪೌರತ್ವವನ್ನು ಮರೆಮಾಚಿ ನೌಕಾನೆಲೆಯ ಲಾಂಡ್ರಿ ವಿಭಾಗದಲ್ಲಿ ಕೆಲಸ ಗಿಟ್ಟಿಸಿಕೊಂಡಿದ್ದನು.
ಮೊಬೈಲ್ ಶೋಧದಿಂದ ಬಯಲಾಯ್ತು ನೈಜ ಬಣ್ಣ
ಕಳೆದ ಕೆಲವು ದಿನಗಳಿಂದ ಈತನ ನಡವಳಿಕೆಯ ಮೇಲೆ ಅನುಮಾನಗೊಂಡ ನೌಕಾಸೇನೆಯ ಅಧಿಕಾರಿಗಳು ಆತನನ್ನು ನಿರಂತರ ನಿಗಾದಲ್ಲಿ ಇರಿಸಿದ್ದರು. ಬಳಿಕ ಆತನನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಿದಾಗ ಹಾಗೂ ಮೊಬೈಲ್ ಫೋನ್ ಪರಿಶೀಲಿಸಿದಾಗ, ಆತ ಬಾಂಗ್ಲಾದೇಶದ ಪ್ರಜೆ ಎಂಬುದನ್ನು ದೃಢೀಕರಿಸುವ ದಾಖಲೆಗಳು ಪತ್ತೆಯಾಗಿವೆ. ಸಂಪೂರ್ಣ ಪರಿಶೀಲನೆಯ ನಂತರ ನೌಕಾಸೇನೆಯು ಶುಕ್ರವಾರ ರಾತ್ರಿ ಆತನನ್ನು ಪಯ್ಯನ್ನೂರು ಪೊಲೀಸರಿಗೆ ಹಸ್ತಾಂತರಿಸಿದೆ.
ಭದ್ರತಾ ವಿಫಲತೆ ಕುರಿತು ತೀವ್ರ ಕಳವಳ
ಯಾವುದೇ ಸಿಂಧುತ್ವವಿಲ್ಲದ ದಾಖಲೆಗಳಿದ್ದರೂ ಈತ ಸುಮಾರು ಒಂದು ವರ್ಷ ಕಾಲ ದೇಶದ ಅತ್ಯಂತ ಸೂಕ್ಷ್ಮ ನೌಕಾ ತರಬೇತಿ ಕೇಂದ್ರದೊಳಗೆ ಹೇಗೆ ಕೆಲಸ ಗಿಟ್ಟಿಸಿಕೊಂಡ ಎಂಬುದು ಭದ್ರತಾ ಪಡೆಗಳಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಕೇಂದ್ರ ಗುಪ್ತಚರ ಸಂಸ್ಥೆಗಳು ನೀಡಿದ ಗೌಪ್ಯ ಮಾಹಿತಿಯನ್ನಾಧರಿಸಿ ಈ ಕಾರ್ಯಚರಣೆ ನಡೆಸಲಾಗಿದೆ.
ಈತನಿಗೆ ನಕಲಿ ಗುರುತಿನ ಚೀಟಿಗಳನ್ನು ಮಾಡಿಸಿಕೊಟ್ಟವರು ಯಾರು? ನೌಕಾನೆಲೆಯಲ್ಲಿ ಕೆಲಸ ಸಿಗಲು ಯಾರು ಸಹಕರಿಸಿದ್ದರು? ಮತ್ತು ಈ ಪ್ರಕರಣದ ಹಿಂದೆ ದೇಶದ ಭದ್ರತೆಗೆ ಧಕ್ಕೆ ತರುವಂತಹ ಯಾವುದಾದರೂ ದೊಡ್ಡ ಜಾಲವಿದೆಯೇ ಎಂಬ ಕೋನದಲ್ಲಿ ತನಿಖಾಧಿಕಾರಿಗಳು ತನಿಖೆ ತೀವ್ರಗೊಳಿಸಿದ್ದಾರೆ.








