ಚಿಕ್ಕಬಳ್ಳಾಪುರ: ಸಾಮಾಜಿಕ ಜಾಲತಾಣಗಳಲ್ಲಿ ಭಯೋತ್ಪಾದನಾ ಕೃತ್ಯಗಳನ್ನು ನಡೆಸುವ ಕುರಿತು ಚರ್ಚೆ ನಡೆಸುತ್ತಿದ್ದ ಬೃಹತ್ ಜಾಲವನ್ನು ಕರ್ನಾಟಕ ರಾಜ್ಯ ಗುಪ್ತಚರ ಇಲಾಖೆ ಯಶಸ್ವಿಯಾಗಿ ಭೇದಿಸಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯ ಆರೋಪಿ ಶಬ್ಬೀರ್ ಹಾಗೂ ಟೆಲಿಗ್ರಾಂ ಗ್ರೂಪ್‌ನ ಅಡ್ಮಿನ್ ಸಲಾಮಿನ್ ಆಲಿಯಾಸ್ ಸಲ್ಮಾನ್ ಎಂಬಿಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಕಳೆದ ನಾಲ್ಕು ತಿಂಗಳಿನಿಂದ ಆರೋಪಿಗಳ ಚಲನವಲನಗಳ ಮೇಲೆ ಹದ್ದಿನ ಕಣ್ಣಿಟ್ಟಿದ್ದ ಗುಪ್ತಚರ ಇಲಾಖೆಯು, ಕಳೆದ ಒಂದು ವಾರದ ಹಿಂದೆ ಶಬ್ಬೀರ್‌ನನ್ನು ವಶಕ್ಕೆ ಪಡೆದು ಪ್ರಾಥಮಿಕ ವಿಚಾರಣೆ ನಡೆಸಿತ್ತು. ಒಳಸಂಚು ಬಯಲಾದ ಹಿನ್ನೆಲೆಯಲ್ಲಿ ಆರೋಪಿಯನ್ನು ಚಿಕ್ಕಬಳ್ಳಾಪುರ ನಗರ ಪೊಲೀಸರ ವಶಕ್ಕೆ ಒಪ್ಪಿಸಲಾಗಿತ್ತು.
ಚಿಕ್ಕಬಳ್ಳಾಪುರ ಪೊಲೀಸರು ಶಬ್ಬೀರ್‌ನನ್ನು ತೀವ್ರ ವಿಚಾರಣೆಗೆ ಒಳಪಡಿಸಿದಾಗ ಟೆಲಿಗ್ರಾಂ ಗ್ರೂಪ್‌ನ ಅಡ್ಮಿನ್ ಸಲಾಮಿನ್ ಆಲಿಯಾಸ್ ಸಲ್ಮಾನ್ ಕುರಿತು ಮಾಹಿತಿ ಲಭ್ಯವಾಗಿತ್ತು. ಮೂಲತಃ ಉತ್ತರ ಪ್ರದೇಶದವನಾದ ಸಲ್ಮಾನ್, ಹಾಸನದಲ್ಲಿ ವಾಸವಾಗಿದ್ದು ರಸ್ತೆ ನಿರ್ಮಾಣ ಕಾಮಗಾರಿಯಲ್ಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ. ಮೂಲತಃ ಉತ್ತರ ಪ್ರದೇಶದವನಾದ ಸಲ್ಮಾನ್, ಹಾಸನದಲ್ಲಿ ವಾಸವಾಗಿದ್ದು ರಸ್ತೆ ನಿರ್ಮಾಣ ಕಾಮಗಾರಿಯಲ್ಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ.
ಆರೋಪಿಗಳು ಸಕ್ರಿಯವಾಗಿದ್ದ ಟೆಲಿಗ್ರಾಂ ಗ್ರೂಪ್‌ನಲ್ಲಿ ಮುಸ್ಲಿಂ ಪರವಾದ ಚಾಟಿಂಗ್‌ಗಳು ನಡೀತಿದ್ದವು. ದೇಶದ ವಿವಿಧೆಡೆ ಮಸೀದಿಗಳನ್ನು ಕೆಡವಿರುವ ಹಾಗೂ ಮುಸ್ಲಿಮರ ಮೇಲೆ ದೌರ್ಜನ್ಯ ಎಸಗಲಾಗುತ್ತಿದೆ ಎಂಬ ವಿಷಯಗಳ ಕುರಿತು ಪ್ರಚೋದನಾಕಾರಿ ಚರ್ಚೆಗಳನ್ನು ನಡೆಸಲಾಗುತ್ತಿತ್ತು. ಈ ಗ್ರೂಪ್‌ನಲ್ಲಿ ರಾಜ್ಯದ ಯಾವುದೇ ರಾಜಕೀಯ ನಾಯಕರನ್ನು ಟಾರ್ಗೆಟ್ ಮಾಡಿದ ಬಗ್ಗೆ ಅಥವಾ ಅವರ ಹೆಸರುಗಳನ್ನು ಉಲ್ಲೇಖಿಸಿ ಚಾಟಿಂಗ್ ನಡೆಸಿದ ಯಾವುದೇ ಕುರುಹುಗಳು ಸದ್ಯಕ್ಕೆ ಪತ್ತೆಯಾಗಿಲ್ಲ.
BNS 113 ಅಡಿ ಪ್ರಕರಣ – ನ್ಯಾಯಾಂಗ ಬಂಧನ:
ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆ (BNS Section 113 – ಭಯೋತ್ಪಾದನಾ ಕೃತ್ಯ) ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಸದ್ಯ ಶಬ್ಬೀರ್ ಹಾಗೂ ಸಲಾಮಿನ್ ಇಬ್ಬರೂ ನ್ಯಾಯಾಂಗ ಬಂಧನದಲ್ಲಿದ್ದಾರೆ. ಗ್ರೂಪ್‌ನಲ್ಲಿರುವ ಉಳಿದ 6 ಜನರ ಮಾಹಿತಿಯನ್ನು ಪೊಲೀಸರು ಕಲೆಹಾಕುತ್ತಿದ್ದು, ಡಿಜಿಟಲ್ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿದ ನಂತರ ವಿಚಾರಣೆಯನ್ನು ಇನ್ನಷ್ಟು ಚುರುಕುಗೊಳಿಸಲಿದ್ದಾರೆ.








