ಲಕ್ನೋ: ಅಯೋಧ್ಯೆ ರಾಮಮಂದಿರ ಕಾಣಿಕೆ ಹಣ ಕಳವು ಪ್ರಕರಣದಲ್ಲಿ ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸಿರುವ ಚಾರ್ಜ್‌ಶೀಟ್‌ನಲ್ಲಿ ಹಲವು ಮಹತ್ವದ ಸಂಗತಿಗಳು ಬಹಿರಂಗವಾಗಿವೆ. ಚಾರ್ಜ್‌ಶೀಟ್ ಪ್ರಕಾರ, ಆರೋಪಿ ಅವಿನಾಶ್ ಶುಕ್ಲಾ ಅಲಿಯಾಸ್ ಶನಿ 85 ಬಾರಿ ದೇಣಿಗೆ ಕಳ್ಳತನ ಮಾಡಿರುವುದು ತನಿಖೆ ವೇಳೆ ಗೊತ್ತಾಗಿದೆ. ಒಟ್ಟು 85 ಬಾರಿ ಕಾಣಿಕೆ ಹಣ ಕಳವು ಮಾಡುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿದೆ. ಅಲ್ಲದೇ, ಇತರ ಆರೋಪಿಗಳಿಗೆ ಕಳವು ಮಾಡಲು ನಾಲ್ಕು ಬಾರಿ ಸಹಕರಿಸಿರುವುದೂ ಸಹ ಬೆಳಕಿಗೆ ಬಂದಿದೆ.
ಚಾರ್ಜ್‌ಶೀಟ್‌ನಲ್ಲಿ ಕರೂಣೇಶ್ ಪಾಂಡೆ ಎರಡು ಬಾರಿ ಕಾಣಿಕೆ ಹಣ ಕಳವು ಮಾಡಿದ್ದು, 68 ಬಾರಿ ಇತರ ಆರೋಪಿಗಳಿಗೆ ಸಹಾಯ ಮಾಡಿರುವುದನ್ನು ಉಲ್ಲೇಖಿಸಲಾಗಿದೆ. ಮನೀಷ್ ಕುಮಾರ್ ಯಾದವ್ 16 ಬಾರಿ ಕಾಣಿಕೆ ಹಣವನ್ನು ತನ್ನ ಬಳಿ ಇಟ್ಟುಕೊಂಡಿದ್ದು, 19 ಬಾರಿ ಇತರರಿಗೆ ಸಹಕರಿಸಿರುವುದ್ದಾನೆ ಎಂದು ಹೇಳಲಾಗಿದೆ.
ರಮಾಶಂಕರ್ ಮಿಶ್ರಾ ಒಂದು ಬಾರಿ ಹಣವನ್ನು ತೆಗೆದು ತನ್ನ ಬಳಿ ಇಟ್ಟುಕೊಂಡಿದ್ದು, ಲವಕುಶ್ ಮಿಶ್ರಾ ಒಂದು ಬಾರಿ ಕಳವು ಮಾಡಿ 52 ಬಾರಿ ಸಹ ಆರೋಪಿಗಳಿಗೆ ನೆರವಾಗಿರುವುದಾಗಿ ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಲಾಗಿದೆ. ಅನೂಕಲ್ಪ್ ಮಿಶ್ರಾ 56 ಬಾರಿ ಇತರ ಆರೋಪಿಗಳು ಕಾಣಿಕೆ ಹಣವನ್ನು ತೆಗೆದುಹಾಕಲು ಸಹಕರಿಸಿರುವುದು ಸಿಸಿಟಿವಿಯಲ್ಲಿ ದಾಖಲಾಗಿದೆ.
ಅನೂಕಲ್ಪ್ ಮಿಶ್ರಾ ಅವರ ಮೊಬೈಲ್ ಡೇಟಾ ಪರಿಶೀಲನೆಯಲ್ಲಿ ಅವಿನಾಶ್ ಶುಕ್ಲಾ ಮತ್ತು ಲವಕುಶ್ ಮಿಶ್ರಾ ಅವರೊಂದಿಗೆ ಕಾಣಿಕೆ ಹಣಕ್ಕೆ ಸಂಬಂಧಿಸಿದ ಸಂದೇಶಗಳು ಪತ್ತೆಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಹಣದ ಬಂಡಲ್‌ಗಳನ್ನು ಇಡುವುದು, ಮರೆಮಾಚುವುದು, ಬದಲಾಯಿಸುವುದು ಹಾಗೂ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸಾಗಿಸುವ ಕುರಿತು ಈ ಸಂದೇಶಗಳಲ್ಲಿ ಚರ್ಚೆ ನಡೆದಿರುವುದಾಗಿ ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಲಾಗಿದೆ.
ಆರೋಪಿಗಳ ಮೊಬೈಲ್ ಕರೆ ವಿವರ ದಾಖಲೆಗಳ (ಸಿಡಿಆರ್) ಪರಿಶೀಲನೆಯಲ್ಲಿ ಪರಸ್ಪರ ನಿರಂತರ ಸಂಪರ್ಕದಲ್ಲಿದ್ದ ಅಂಶ ಪತ್ತೆಯಾಗಿದೆ. ಸಿಸಿಟಿವಿ, ಡಿಜಿಟಲ್, ಮೌಖಿಕ ಮತ್ತು ಸಾಂದರ್ಭಿಕ ಸಾಕ್ಷ್ಯಗಳ ಆಧಾರದಲ್ಲಿ ಪರಸ್ಪರ ಸಮನ್ವಯ ಹಾಗೂ ಕ್ರಿಮಿನಲ್ ಸಂಚಿನ ಆರೋಪವನ್ನು ಪೊಲೀಸರು ದಾಖಲಿಸಿದ್ದಾರೆ.
ಜುಲೈ 25ರಿಂದ 30ರವರೆಗೆ ದಾಖಲಾಗಿರುವ ಸಿಸಿಟಿವಿ ದೃಶ್ಯಗಳನ್ನೂ ತನಿಖೆಯಲ್ಲಿ ಪರಿಶೀಲಿಸಲಾಗಿದೆ. ಸುಭಾಷ್ ಶ್ರೀವಾಸ್ತವ್ ಉಪಸ್ಥಿತಿಯಲ್ಲಿ ಕಾಣಿಕೆ ಹಣ ಎಣಿಕೆ ನಡೆಯುತ್ತಿದ್ದ ವೇಳೆ ಅವಿನಾಶ್ ಶುಕ್ಲಾ ಹಣವನ್ನು ತೆಗೆದು ತನ್ನ ಬಳಿ ಇಟ್ಟುಕೊಂಡಿರುವುದು ದೃಶ್ಯಗಳಲ್ಲಿ ಕಂಡುಬಂದಿದೆ ಎಂದು ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಲಾಗಿದೆ.
ಈ ಪ್ರಕರಣದಲ್ಲಿ ಟ್ರಸ್ಟ್‌ನ ಮಾಜಿ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್, ಟ್ರಸ್ಟಿ ಅನಿಲ್ ಮಿಶ್ರಾ ಮತ್ತು ನಿರ್ಮಾಣ ಉಸ್ತುವಾರಿ ಗೋಪಾಲ್ ರಾವ್‌ರನ್ನು ಪ್ರಾಸಿಕ್ಯೂಷನ್ ಸಾಕ್ಷಿಗಳಾಗಿ ಹೆಸರಿಸಲಾಗಿದೆ.








