ಮಂಗಳೂರು: ಸಿಬಿಐ ಹಾಗೂ ಮುಂಬೈ ಪೊಲೀಸ್ ಅಧಿಕಾರಿಗಳ ಹೆಸರಿನಲ್ಲಿ ‘ಡಿಜಿಟಲ್ ಅರೆಸ್ಟ್’ ಬೆದರಿಕೆಯೊಡ್ಡಿ 75 ವರ್ಷದ ವೃದ್ಧೆಯೊಬ್ಬರಿಂದ ಬರೋಬ್ಬರಿ 2 ಕೋಟಿ ರೂಪಾಯಿ ಹಣವನ್ನು ದೋಚಿರುವ ಭಾರಿ ಸೈಬರ್ ವಂಚನೆ ಪ್ರಕರಣ ಬೆಳಕಿಗೆ ಬಂದಿದೆ.
ವಂಚಕರ ಮಾತು ನಂಬಿ ಹಂತ ಹಂತವಾಗಿ ₹2,00,00,000 ಹಣ ವರ್ಗಾಯಿಸಿ ವಂಚನೆಗೊಳಗಾದ ವೃದ್ಧೆ ನೀಡಿದ ದೂರಿನನ್ವಯ ಸೈಬರ್ ಕ್ರೈಮ್ (CEN) ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ದೂರುದಾರರಾದ 75 ವರ್ಷದ ವೃದ್ಧೆಗೆ ಸೆಪ್ಟೆಂಬರ್ 25, 2026 ರಂದು ಅಪರಿಚಿತ ಸಂಖ್ಯೆಯಿಂದ ಕರೆ ಬಂದಿದೆ. ಕರೆ ಮಾಡಿದ ವ್ಯಕ್ತಿ ತಾನು ಮುಂಬೈನ ಕೊಲಾಬಾ ಪೊಲೀಸ್ ಠಾಣೆಯ ಅಧಿಕಾರಿ ಸಂದೀಪ್ ರಾವ್ ಎಂದು ಪರಿಚಯಿಸಿಕೊಂಡಿದ್ದಾನೆ. ಅಂತರಾಷ್ಟ್ರೀಯ ಮನಿ ಲ್ಯಾಂಡರಿಂಗ್ ಆರೋಪಿ ನರೇಶ್ ಗೋಯಲ್ ಜೊತೆ ಸೇರಿ ನೀವು ಮನಿ ಲ್ಯಾಂಡರಿಂಗ್, ಡ್ರಗ್ಸ್ ಡೀಲಿಂಗ್ ಹಾಗೂ ಚೈಲ್ಡ್ ಟ್ರಾಫಿಕಿಂಗ್ನಂತಹ ಭೀಕರ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದೀರಿ ಮತ್ತು ನಿಮ್ಮ ವಿರುದ್ಧ ಕೊಲಾಬಾ ಠಾಣೆಯಲ್ಲಿ ಕೇಸ್ ದಾಖಲಾಗಿದೆ ಎಂದು ಬೆದರಿಸಿದ್ದಾನೆ.
ಬಳಿಕ ವಾಟ್ಸಾಪ್ ಮೂಲಕ ವೀಡಿಯೊ ಕಾಲ್ ಮಾಡಿದ ಮತ್ತೊಬ್ಬ ಅಪರಿಚಿತ ವ್ಯಕ್ತಿ, ತಾನು ಸಿಬಿಐ ಅಧಿಕಾರಿ ‘ಸಮಾಧಾನ್ ಪವಾರ್’ ಎಂದು ಹೇಳಿಕೊಂಡಿದ್ದಾನೆ. ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಚಂದ್ರಚೂಡ್ ಅವರು ನಿಮಗೆ ಸಹಾಯ ಮಾಡುತ್ತಿದ್ದು, ಸುಪ್ರೀಂ ಕೋರ್ಟ್ನ ‘ನ್ಯಾಷನಲ್ ಸೀಕ್ರೆಸಿ ಆಕ್ಟ್’ (National Secrecy Act) ಅಡಿಯಲ್ಲಿ ಪ್ರಕರಣ ರಹಸ್ಯವಾಗಿಡಬೇಕು ಹಾಗೂ ಯಾರೊಂದಿಗೂ ಹಂಚಿಕೊಳ್ಳಬಾರದು ಎಂದು ವೃದ್ಧೆಯನ್ನು ಸರ್ವೇಲೆನ್ಸ್ ಹೆಸರಿನಲ್ಲಿ ಡಿಜಿಟಲ್ ಬಂಧನದಲ್ಲಿರಿಸಿದ್ದಾನೆ.
ನಿಮ್ಮ ಆಸ್ತಿ ಹಾಗೂ ಬ್ಯಾಂಕ್ ಖಾತೆಗಳ ಹಣವನ್ನು ಪರಿಶೀಲಿಸಿ 2 ದಿನಗಳಲ್ಲಿ ಕ್ಲಿಯರೆನ್ಸ್ ಪ್ರಮಾಣಪತ್ರ ನೀಡುವುದಾಗಿ ವಂಚಕರು ನಂಬಿಸಿದ್ದಾರೆ. ಅವರ ಮಾತುಗಳನ್ನು ಸಂಪೂರ್ಣವಾಗಿ ನಂಬಿದ ವೃದ್ಧೆ ತಮ್ಮ ಬ್ಯಾಂಕ್ ಹಾಗೂ ಆಸ್ತಿ ವಿವರಗಳನ್ನು ಹಂಚಿಕೊಂಡಿದ್ದಾರೆ.
ನಂತರ, ಸೈಬರ್ ತನಿಖೆಯ ನೆಪದಲ್ಲಿ ಸೂಚಿಸಿದ ಬ್ಯಾಂಕ್ ಖಾತೆಗಳಿಗೆ ಹಣ ವರ್ಗಾಯಿಸಲು ವಂಚಕರು ಸೂಚಿಸಿದ್ದಾರೆ. ಅದರಂತೆ ವೃದ್ಧೆಯು ಹಂತ ಹಂತವಾಗಿ ₹60 ಲಕ್ಷ ಹಾಗೂ ಅಕ್ಟೋಬರ್ 3, 2026 ರಂದು ₹1.40 ಕೋಟಿ ಹಣವನ್ನು ವಂಚಕರು ನೀಡಿದ್ದ ಬ್ಯಾಂಕ್ ಆಫ್ ಇಂಡಿಯಾ (Bank of India) ಖಾತೆಗೆ ಆರ್ಟಿಜಿಎಸ್ (RTGS) ಮೂಲಕ ವರ್ಗಾಯಿಸಿದ್ದಾರೆ.
ಸೆಪ್ಟೆಂಬರ್ 25 ರಿಂದ ಅಕ್ಟೋಬರ್ 5 ರ ನಡುವಿನ ಅವಧಿಯಲ್ಲಿ ಒಟ್ಟು 2,00,00,000 (ರೂ. 2 ಕೋಟಿ) ಹಣವನ್ನು ವರ್ಗಾಯಿಸಿಕೊಂಡ ನಂತರ ಅಪರಿಚಿತ ವ್ಯಕ್ತಿಗಳು ಸಂಪರ್ಕಕ್ಕೆ ಸಿಗದೆ ಸೈಬರ್ ವಂಚನೆ ಎಸಗಿರುವುದು ಅರಿವಿಗೆ ಬಂದಿದೆ. ಘಟನೆ ಕುರಿತು ಸೈಬರ್ ಕ್ರೈಮ್ ಠಾಣೆಯಲ್ಲಿ ಮಾಹಿತಿ ತಂತ್ರಜ್ಞಾನ (IT Act) ಹಾಗೂ ಬಿಎನ್ಎಸ್ (BNS) ಕಾಯ್ದೆಯಡಿ ದೂರು ದಾಖಲಾಗಿದ್ದು, ಪೊಲೀಸರು ವಂಚಕರ ಜಾಲ ಪತ್ತೆಗೆ ತನಿಖೆ ಚುರುಕುಗೊಳಿಸಿದ್ದಾರೆ.








