ಮುಂಬೈ: ಬಾಲಿವುಡ್ನ ಹಿರಿಯ ನಟ ನಾನಾ ಪಾಟೇಕರ್ ಅವರ ನಿಧನದ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ವಿರುದ್ಧ ಕೇಳಿಬರುತ್ತಿರುವ ತೀವ್ರ ನಕಾರಾತ್ಮಕ ಪ್ರತಿಕ್ರಿಯೆಗಳು ಹಾಗೂ ಟ್ರೋಲ್ಗಳಿಗೆ ನಟಿ ತನುಶ್ರೀ ದತ್ತಾ ಖಾರವಾಗಿ ತಿರುಗೇಟು ನೀಡಿದ್ದಾರೆ. “ಒಬ್ಬ ವ್ಯಕ್ತಿ ಮೃತಪಟ್ಟ ಮಾತ್ರಕ್ಕೆ ಅವರು ಬದುಕಿದ್ದಾಗ ಮಾಡಿದ ಅಪರಾಧಗಳು ಹಾಗೂ ಇತರರಿಗೆ ನೀಡಿದ ಕಿರುಕುಳ ಅಳಿಸಿಹೋಗುವುದಿಲ್ಲ” ಎಂದು ತನುಶ್ರೀ ಆಕ್ರೋಶ ವ್ಯಕ್ತಪಡಿಸಿದ್ದಾರೆ.
2008 ರ ‘ಹಾರ್ನ್ ಓಕೆ ಪ್ಲೀಸ್’ ಚಿತ್ರದ ಐಟಂ ಹಾಡಿನ ಚಿತ್ರೀಕರಣದ ವೇಳೆ ನಾನಾ ಪಾಟೇಕರ್ ತಮ್ಮೊಂದಿಗೆ ಅನುಚಿತವಾಗಿ ವರ್ತಿಸಿದ್ದರು ಎಂದು ತನುಶ್ರೀ 2018 ರಲ್ಲಿ ಆರೋಪಿಸಿದ್ದರು. ಈ ಆರೋಪವು ಭಾರತದಲ್ಲಿ ‘ಮಿಟೂ’ ಚಳವಳಿಗೆ ಭಾರಿ ವೇಗ ನೀಡಿತ್ತು. ಇನ್ಸ್ಟಾಗ್ರಾಂನಲ್ಲಿ ವೀಡಿಯೊ ಹಂಚಿಕೊಂಡಿರುವ ತನುಶ್ರೀ, ಮಿಟೂ ಚಳವಳಿಯ ಬಳಿಕ ತಮ್ಮ ಜೀವನ ನರಕವಾಗಿತ್ತು ಎಂದು ಹೇಳಿದ್ದಾರೆ. “ಮಿಟೂ ಬಳಿಕ ಗೂಂಡಾಗಳು ನನ್ನನ್ನು ಎಲ್ಲೆಡೆ ಹಿಂಬಾಲಿಸುತ್ತಿದ್ದರು. 2024 ರಲ್ಲಿ ನನ್ನ ಕಾರಿನ ಬ್ರೇಕ್ಗಳನ್ನು ಯಾರೋ ಕತ್ತರಿಸಿ ಜೀವ ತೆಗೆಯಲು ಯತ್ನಿಸಿದ್ದರು. 2020 ರ ಬಳಿಕ ಪ್ರತಿದಿನವೂ ಹೋರಾಟ ಮತ್ತು ನೋವಿನಲ್ಲೇ ಕಳೆದಿದ್ದೇನೆ. ನಾನಾ ಪಾಟೇಕರ್ ಮಾತ್ರವಲ್ಲದೆ ಅವರೊಟ್ಟಿಗಿದ್ದ ದೊಡ್ಡ ಗುಂಪೇ ನನಗೆ ತೊಂದರೆ ನೀಡಿತ್ತು” ಎಂದು ತನುಶ್ರೀ ಗಂಭೀರ ಆರೋಪ ಮಾಡಿದ್ದಾರೆ.
ನಾನಾ ಪಾಟೇಕರ್ ಅವರನ್ನು ಕ್ಷಮಿಸುವಂತೆ ನೆಟ್ಟಿಗರು ನೀಡುತ್ತಿರುವ ಸಲಹೆಗೆ ಕಿಡಿಕಾರಿರುವ ತನುಶ್ರೀ, “ಅವರು ನನ್ನ ಬಳಿ ಎಂದಿಗೂ ಕ್ಷಮೆ ಕೇಳಿರಲಿಲ್ಲ. ತಾನು ತಪ್ಪು ಮಾಡಿದ್ದೇನೆ, ಮತ್ತೊಬ್ಬರ ಜೀವನ ಹಾಳು ಮಾಡಿದ್ದೇನೆ ಎಂಬುದನ್ನು ಒಪ್ಪಿಕೊಂಡು ಕ್ಷಮೆ ಕೇಳದಿದ್ದರೆ ದೇವರೂ ಕ್ಷಮಿಸುವುದಿಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ. ತಮ್ಮ ಬಗ್ಗೆ ವೀಡಿಯೋ ಮಾಡಿ ಲೈಕ್ಸ್ ಮತ್ತು ವೀಕ್ಷಣೆ ಗಳಿಸುತ್ತಿರುವ ಯೂಟ್ಯೂಬರ್ಗಳನ್ನು ತರಾಟೆಗೆ ತೆಗೆದುಕೊಂಡಿರುವ ಅವರು, “ನನ್ನ ಅನುಭವದ ಆಧಾರದ ಮೇಲೆ ನಾನು ‘ದುಷ್ಟನ ಅಂತ್ಯವಾಗಿದೆ’ ಎಂದು ಹೇಳಿದ್ದೆ. ಆ ವ್ಯಕ್ತಿ ಸತ್ತ ಬಳಿಕವೂ ನನಗೆ ಕಿರುಕುಳ ನೀಡಲಾಗುತ್ತಿದೆ” ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
2018 ರಲ್ಲಿ ತನುಶ್ರೀ ನೀಡಿದ ದೂರಿನನ್ವಯ ನಾನಾ ಪಾಟೇಕರ್ ವಿರುದ್ಧ ಎಫ್ಐಆರ್ ದಾಖಲಾಗಿತ್ತಾದರೂ, ನಾನಾ ಪಾಟೇಕರ್ ಆರೋಪಗಳನ್ನು ನಿರಂತರವಾಗಿ ನಿರಾಕರಿಸಿದ್ದರು. ಬಳಿಕ ಸೂಕ್ತ ಸಾಕ್ಷ್ಯಾಧಾರಗಳ ಅಭಾವದಿಂದಾಗಿ ಪೊಲೀಸರು ಪ್ರಕರಣವನ್ನು ಮುಕ್ತಾಯಗೊಳಿಸಿದ್ದರು.








