ಬಾಲಿವುಡ್ ನಟ ಅಜಯ್ ದೇವಗನ್ ಅವರ ಮುಂಬೈನ ಜುಹು ಬಂಗಲೆಯಲ್ಲಿ ನಡೆಯುತ್ತಿರುವ ಅನಧಿಕೃತ ನಿರ್ಮಾಣ ಕಾಮಗಾರಿಗೆ ಮುಂಬೈ ಬಿಎಂಸಿ ಬ್ರೇಕ್ ಹಾಕಿದೆ.
ನಿರ್ಮಾಣಕ್ಕೆ ನಾಗರಿಕ ಪ್ರಾಧಿಕಾರದ ಅನುಮತಿ ಇದೆ ಎಂಬುದನ್ನು ದೃಢಪಡಿಸುವ ದಾಖಲೆಗಳನ್ನು ಸಲ್ಲಿಸಲು ವಿಫಲವಾದ ಹಿನ್ನೆಲೆಯಲ್ಲಿ, ಮಾಲೀಕರು ನೀಡಿದ್ದ ಉತ್ತರವನ್ನು ಬಿಎಂಸಿ ತಿರಸ್ಕರಿಸಿದೆ. ಅಲ್ಲದೆ, ನಡೆಯುತ್ತಿರುವ ನಿರ್ಮಾಣ ಕಾಮಗಾರಿಯನ್ನು ಅನಧಿಕೃತವೆಂದು ಪರಿಗಣಿಸಿದೆ.
ಜುಹುವಿನ ಕಪೋಲ್ ಸಹಕಾರಿ ವಸತಿ ಸಂಘದಲ್ಲಿರುವ ಈ ಬಂಗಲೆ ನಟ ಅಜಯ್ ದೇವಗನ್ ಮತ್ತು ಅವರ ತಾಯಿ ವೀಣಾ ದೇವಗನ್ ಅವರ ಒಡೆತನದಲ್ಲಿದೆ.
ಅನುಮತಿ ದಾಖಲೆ ಸಲ್ಲಿಸಲು ವಿಫಲ
ಅಕ್ಟೋಬರ್ 6ರಂದು ಹೊರಡಿಸಿದ ಆದೇಶದಲ್ಲಿ, ಬಿಎಂಸಿಯ ಕೆ/ವೆಸ್ಟ್ ವಾರ್ಡ್ ಕಚೇರಿಯು ಈ ವಿಚಾರವನ್ನು ಉಲ್ಲೇಖಿಸಿದೆ. ಸೆಪ್ಟೆಂಬರ್ 15ರಂದು ಮಾಲೀಕರು ಸಲ್ಲಿಸಿದ್ದ ಉತ್ತರದಲ್ಲಿ ನಿರ್ಮಾಣ ಕಾಮಗಾರಿಗೆ ಅನುಮತಿ ಇದೆ ಎಂಬುದನ್ನು ಸಾಬೀತುಪಡಿಸುವ ದಾಖಲೆಗಳು ಅಥವಾ ಸಕ್ಷಮ ಪ್ರಾಧಿಕಾರ ನೀಡಿದ ಅನುಮತಿಯ ಪ್ರತಿಯನ್ನು ಒದಗಿಸಿರಲಿಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ
ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ ಕಾಯ್ದೆಯ ಸೆಕ್ಷನ್ 354A ಅಡಿಯಲ್ಲಿ ಸೆಪ್ಟೆಂಬರ್ 10ರಂದು ಬಿಎಂಸಿ ಕಾಮಗಾರಿ ಸ್ಥಗಿತಗೊಳಿಸುವ ನೋಟಿಸ್ ನೀಡಿತ್ತು. ಜುಹುವಿನ ಕಪೋಲ್ ಸಿಎಚ್ಎಸ್ ಲಿಮಿಟೆಡ್ನಲ್ಲಿರುವ ಸಿಟಿಎಸ್ ಸಂಖ್ಯೆ 841, ಪ್ಲಾಟ್ ಸಂಖ್ಯೆ 10ರ ಬಂಗಲೆಯಲ್ಲಿ ಸಿಪೋರೆಕ್ಸ್ ಬ್ಲಾಕ್ಗಳನ್ನು ಬಳಸಿ ಅನಧಿಕೃತ ಸೇರ್ಪಡೆ ಮತ್ತು ಮಾರ್ಪಾಡುಗಳನ್ನು ಮಾಡಲಾಗುತ್ತಿದೆ ಎಂದು ನೋಟಿಸ್ನಲ್ಲಿ ಆರೋಪಿಸಲಾಗಿತ್ತು.
ನಿರ್ಮಾಣ ಕಾಮಗಾರಿಯನ್ನು ತಕ್ಷಣವೇ ನಿಲ್ಲಿಸಿ, 24 ಗಂಟೆಗಳ ಒಳಗೆ ಸಂಬಂಧಿತ ಅನುಮತಿ ದಾಖಲೆಗಳನ್ನು ಸಲ್ಲಿಸುವಂತೆ ಬಿಎಂಸಿ ಮಾಲೀಕರು ಸೂಚಿಸಿತ್ತು. ಸೂಚನೆಗಳನ್ನು ಪಾಲಿಸದಿದ್ದರೆ, ಅನಧಿಕೃತ ನಿರ್ಮಾಣ ಮತ್ತು ಕಟ್ಟಡ ಸಾಮಗ್ರಿಗಳನ್ನು ಮಾಲೀಕರ ಅಪಾಯ ಹಾಗೂ ವೆಚ್ಚದಲ್ಲಿ ತೆರವುಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿತ್ತು.
ಅಗತ್ಯವಿದ್ದಲ್ಲಿ ಸ್ಥಳದಲ್ಲಿ ಪೊಲೀಸರು ನಿಗಾ ವಹಿಸಲು ಹಾಗೂ ಕಾಮಗಾರಿ ನಡೆಸುತ್ತಿರುವವರನ್ನು ಅಲ್ಲಿಂದ ತೆರವುಗೊಳಿಸಲು ಸಹ ಕ್ರಮ ಕೈಗೊಳ್ಳಬಹುದು ಎಂದು ನೋಟಿಸ್ನಲ್ಲಿ ತಿಳಿಸಲಾಗಿತ್ತು
ಅಗತ್ಯ ಅನುಮತಿಗೆ ಸಂಬಂಧಿಸಿದ ದಾಖಲೆಗಳನ್ನು ಸಲ್ಲಿಸದ ಹಿನ್ನೆಲೆಯಲ್ಲಿ ಬಿಎಂಸಿ ಮಾಲೀಕರ ಉತ್ತರವನ್ನು ತಿರಸ್ಕರಿಸಿದ್ದು, ಬಂಗಲೆಯಲ್ಲಿ ನಡೆಯುತ್ತಿರುವ ನಿರ್ಮಾಣ ಕಾಮಗಾರಿಯನ್ನು ತೆರವುಗೊಳಿಸಲಾಗಿದೆ








