ಬಂಟ್ವಾಳ: ವೈವಾಹಿಕ ಕಲಹದ ಹಿನ್ನೆಲೆಯಲ್ಲಿ ಪತಿಯಿಂದ ಹಲ್ಲೆಗೊಳಗಾಗಿದ್ದ ಮಹಿಳೆಯೊಬ್ಬರು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಬಂಟ್ವಾಳದ ವಗ್ಗ ಎಂಬಲ್ಲಿ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಬಂಟ್ವಾಳ ಗ್ರಾಮಾಂತರ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿ ಪತಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಬಾಗಲಕೋಟೆ, ಜಮಖಂಡಿ ಮೂಲದ ಆರೋಪಿ ಸಂಜೀವಕುಮಾರ್ (36) ಅವರ ಪತ್ನಿ ಸುನೀತಾ ಮಹಾದೇವ್ ದೇಸಂಗಿ (34) ಮೃತ ದುರ್ದೈವಿ. ಈ ದಂಪತಿ ಬಂಟ್ವಾಳ ತಾಲೂಕಿನ ವಗ್ಗದಲ್ಲಿ ವಾಸವಾಗಿದ್ದರು.
ಮೃತರ ಸಹೋದರ ಬೆಳಗಾವಿ ಜಿಲ್ಲೆಯ ಅಥಣಿ ನಿವಾಸಿ ಅರುಣ್ ಮಹಾದೇವ್ ದೇಸಂಗಿ (26) ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ದೂರಿನ ಪ್ರಕಾರ, ಸುನೀತಾ ಮತ್ತು ಆಕೆಯ ಪತಿಯ ನಡುವೆ ಮನಸ್ತಾಪಗಳಿದ್ದು, ಸಂಬಂಧಿಕರು ಮಧ್ಯಪ್ರವೇಶಿಸಿ ರಾಜಿ ಪಂಚಾಯಿತಿ ನಡೆಸಿದ್ದರು. ಹೆರಿಗೆಯ ಬಳಿಕ ಸುನೀತಾ ತಮ್ಮ ತವರು ಮನೆಯಲ್ಲಿದ್ದರು. ಅಕ್ಟೋಬರ್ 4 ರಂದು ಆರೋಪಿ ಪತಿ ಸಂಜೀವಕುಮಾರ್ ಆಕೆಯನ್ನು ಬಂಟ್ವಾಳದಲ್ಲಿದ್ದ ತಮ್ಮ ಮನೆಗೆ ಕರೆತಂದಿದ್ದರು.
ಅಕ್ಟೋಬರ್ 22 ರಂದು ಸುನೀತಾ ತಮ್ಮ ಸಹೋದರನಿಗೆ ಕರೆ ಮಾಡಿ, ಪತಿ ತನಗೆ ಕಿರುಕುಳ ನೀಡುತ್ತಿದ್ದು, ದೈಹಿಕವಾಗಿ ಹಲ್ಲೆ ನಡೆಸುತ್ತಿದ್ದಾನೆ ಎಂದು ತಿಳಿಸಿದ್ದರು. ಅಕ್ಟೋಬರ್ 23 ರ ಬೆಳಗ್ಗೆ ಸಂಜೀವಕುಮಾರ್ ದೂರುದಾರರಿಗೆ ಕರೆ ಮಾಡಿ, ಸುನೀತಾ ಅವರ ಆರೋಗ್ಯ ಕ್ಷೀಣಿಸಿದ್ದು ಆಸ್ಪತ್ರೆಗೆ ಕರೆದೊಯ್ಯಲಾಗುತ್ತಿದೆ ಎಂದು ಮಾಹಿತಿ ನೀಡಿದ್ದರು.
ಅರುಣ್ ತಕ್ಷಣ ಆಗಮಿಸಿ ತಮ್ಮ ಸಹೋದರಿಯನ್ನು ಪರಿಶೀಲಿಸಿದಾಗ ಆಕೆ ಮೃತಪಟ್ಟಿರುವುದು ಕಂಡುಬಂದಿದೆ. ಮೃತದೇಹವನ್ನು ಪರಿಶೀಲಿಸಿದಾಗ ಹಲ್ಲೆಯಿಂದ ಉಂಟಾದ ಗಾಯದ ಗುರುತುಗಳು ಹಾಗೂ ರಕ್ತದ ಕಲೆಗಳು ಕಂಡುಬಂದಿವೆ. ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಅಕ್ಟೋಬರ್ 22 ರ ರಾತ್ರಿ ಮತ್ತು ಅಕ್ಟೋಬರ್ 23 ರ ಮುಂಜಾನೆ ವೇಳೆ ಸಂಜೀವಕುಮಾರ್ ಸುನೀತಾ ಅವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಕೊಲೆ ಮಾಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ದೂರಿನ ಮೇರೆಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅ.ಕ್ರ: 142/2026, ಕಲಂ:103 BNS 2023 ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.
ಆರೋಪಿ ಸಂಜೀವಕುಮಾರ್ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದ್ದು, ಶೀಘ್ರದಲ್ಲೇ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ








