ಬೆಂಗಳೂರು: ಮಾಜಿ ಸಿಎಂ ಸಿದ್ದರಾಮಯ್ಯ ಬಗ್ಗೆ ಸ್ಟಿಂಗ್ ಆಪರೇಷನ್ ವಿಚಾರವಾಗಿ ರಾಜ್ಯ ರಾಜಕೀಯದಲ್ಲಿ ದಿನಕ್ಕೊಂದು ಬೆಳವಣಿಗೆಗಳು ನಡೆಯುತ್ತಿವೆ. ಆಡಳಿತ ವಿಪಕ್ಷಗಳ ನಡುವೆ ವಾಕ್ಸಮರವೇ ಆರಂಭವಾಗಿದೆ. ಅದರಲ್ಲೂ ಕರ್ನಾಟಕದ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಮತ್ತು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ನಡುವೆ ಮಾತಿನ ಕಾಳಗವೇ ಆಗ್ತಿದೆ. ಈ ಹೊತ್ತಲ್ಲಿ ಮತ್ತೊಂದು ಹನಿಟ್ರ್ಯಾಪ್ ಕೇಸ್ ಮುನ್ನೆಲೆಗೆ ಬಂದಿದ್ದು, ಖಾಸಗಿ ಚಾನಲ್ ವಿರುದ್ಧ ನಿರ್ಬಂಧಕಾಜ್ಞೆ ಕೋರಿ ಹೈಕೋರ್ಟ್ಗೆ ಅರ್ಜಿ ಸಲ್ಲಿಕೆಯಾಗಿದೆ.
ಮಹಿಳೆಯನ್ನು ಬಿಟ್ಟು ಖಾಸಗಿ ಕ್ಷಣಗಳ ರೆಕಾರ್ಡ್ ಮಾಡಿ ಈಗ ಪ್ರಸಾರ ಮಾಡುವುದಾಗಿ ಬೆದರಿಕೆ ಆರೋಪ ಸಂಬಂಧ ಮಾಗಡಿ ಕ್ಷೇತ್ರದ ಜೆಡಿಎಸ್ನ ಮಾಜಿ ಶಾಸಕ ಎ.ಮಂಜುನಾಥ್ ಹೈಕೋರ್ಟ್ಗೆ ರಿಟ್ ಅರ್ಜಿ ಸಲ್ಲಿಸಿದ್ದಾರೆ. 2018ರ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದಿಂದ ಸ್ಪರ್ಧಿಸಿ ಜಯಗಳಿಸಿ, 2023ರವರೆಗೆ ಇವರು ಮಾಗಡಿ ಕ್ಷೇತ್ರದ ಶಾಸಕರಾಗಿದ್ದರು. ಮಂಜುನಾಥ್ ಅವರು ಹಾಲಿ ಜೆಡಿಎಸ್ನ ರಾಜ್ಯ ಕೋರ್ ಕಮಿಟಿ ಸದಸ್ಯ.
ಹೈಕೋರ್ಟ್ಗೆ ಸಲ್ಲಿಸಿದ ಅರ್ಜಿಯಲ್ಲಿ ಏನಿದೆ?
ರಹಸ್ಯವಾಗಿ ಚಿತ್ರೀಕರಿಸಿದ ‘ಸ್ಟಿಂಗ್ ವಿಡಿಯೋ’ ಇರುವುದಾಗಿ ವಾಹಿನಿಯ ಕಾರ್ಯಕ್ರಮದಲ್ಲಿಯೇ ಹೇಳಲಾಗಿದೆ. ವಿಜಯದಶಮಿ ಮುಗಿದ ಬಳಿಕ ಆ ವಿಡಿಯೋವನ್ನು ತೋರಿಸುವುದಾಗಿಯೂ ತಿಳಿಸಿದ್ದಾರೆ. ಆ ವಿಡಿಯೋ ಅಸ್ತಿತ್ವದಲ್ಲಿದ್ದರೆ, ಅದು 2023ರ ಮಾರ್ಚ್ನಲ್ಲಿ ನಡೆದ ಘಟನೆಯಾಗಿದೆ. ಒಂದು ನೆಪವೊಡ್ಡಿ ಕರೆಸಿಕೊಂಡು, ಅರಿವಿಗೆ ಬಾರದಂತೆ ರಹಸ್ಯವಾಗಿ ವಿಡಿಯೋ ಚಿತ್ರೀಕರಣ ಮಾಡಲಾಗಿದೆ. ಆದರೆ ಅರ್ಜಿದಾರರು ಆ ವಿಡಿಯೋವನ್ನು ಎಂದಿಗೂ ನೋಡಿಲ್ಲ ಎಂದು ಹೈಕೋರ್ಟ್ಗೆ ಸಲ್ಲಿಸಲಾದ ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ








