ಉಡುಪಿ : ಬಾಡಿಗೆ ಮನೆಯ ಠೇವಣಿ ಹಣವನ್ನು ಮರಳಿ ನೀಡಿಲ್ಲ ಎಂಬ ಸಣ್ಣ ವಿವಾದ ವಿಕೋಪಕ್ಕೆ ತಿರುಗಿ, ಎಂಬ್ರಾಯ್ಡರಿ ಅಂಗಡಿ ಮಾಲಕನ ಮೇಲೆ ವ್ಯಕ್ತಿಯೊಬ್ಬ ಆಸಿಡ್ ಎರಚಿ, ತಲವಾರಿನಿಂದ ಹಲ್ಲೆ ನಡೆಸಿದ ಆಘಾತಕಾರಿ ಘಟನೆ ಉಡುಪಿಯಲ್ಲಿ ಬುಧವಾರ ನಡೆದಿದೆ. ದಾಳಿಯಲ್ಲಿ ಇಂದ್ರಾಳಿ ಬುಡ್ನಾರು ನಿವಾಸಿ, ಎಂಬ್ರಾಯ್ಡರಿ ಅಂಗಡಿ ಮಾಲಕ ನವೀನ್ ಕುಮಾರ್ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಆರೋಪಿ, ವೃತ್ತಿಯಲ್ಲಿ ಅಕ್ಕಸಾಲಿಗನಾಗಿರುವ ಸುರೇಶ್ ಆಚಾರ್ಯ (48) ಎಂಬಾತನನ್ನು ಪೊಲೀಸರು ತಕ್ಷಣವೇ ಬಂಧಿಸಿದ್ದಾರೆ.
ಪೊಲೀಸರ ಮಾಹಿತಿಯಂತೆ, ಆರೋಪಿ ಸುರೇಶ್ ಆಚಾರ್ಯ ಈ ಹಿಂದೆ ನವೀನ್ ಕುಮಾರ್ ಅವರ ಬಾಡಿಗೆ ಮನೆಯಲ್ಲಿ ನೆಲೆಸಿದ್ದನು. ಮನೆ ಖಾಲಿ ಮಾಡುವ ಸಂದರ್ಭದಲ್ಲಿ ತಾನು ನೀಡಿದ್ದ ₹20,000 ಅಡ್ವಾನ್ಸ್ ಡೆಪಾಸಿಟ್ ಮೊತ್ತವನ್ನು ಮರಳಿ ನೀಡುವಂತೆ ನವೀನ್ ಅವರ ಬಳಿ ಕೇಳಿದ್ದನು. ಆದರೆ, ಸುರೇಶ್ ಆಚಾರ್ಯ ಸುಸ್ಥಿತಿಯಲ್ಲಿದ್ದ ಮನೆಯನ್ನು ಹಾಳು ಮಾಡಿದ್ದಾನೆ ಎಂಬ ಕಾರಣ ನೀಡಿ ನವೀನ್ ಕುಮಾರ್ ಡೆಪಾಸಿಟ್ ಹಣವನ್ನು ಹಿಂತಿರುಗಿಸಲು ಒಪ್ಪಿರಲಿಲ್ಲ. ಈ ವಿಚಾರವಾಗಿ ಇಬ್ಬರ ನಡುವೆ ಈ ಹಿಂದೆಯೂ ಸಾಕಷ್ಟು ಬಾರಿ ಜಗಳ, ವಾಗ್ವಾದಗಳು ನಡೆದಿದ್ದವು.
ಬುಧವಾರದಂದು ಮದ್ಯದ ಅಮಲಿನಲ್ಲಿದ್ದ ಆರೋಪಿ ಸುರೇಶ್ ಆಚಾರ್ಯ, ನವೀನ್ ಅವರ ಎಂಬ್ರಾಯ್ಡರಿ ಅಂಗಡಿಗೆ ತೆರಳಿ ಮತ್ತೆ ಹಣಕ್ಕಾಗಿ ಗಲಾಟೆ ಆರಂಭಿಸಿದ್ದಾನೆ. ಮಾತುಕತೆ ತೀವ್ರ ಸ್ವರೂಪ ತಳೆಯುತ್ತಿದ್ದಂತೆಯೇ, ತಾನು ತನ್ನ ಸ್ಕೂಟರ್ನಲ್ಲಿ ತಂದಿದ್ದ ಮಾರಕಾಯುಧ ತಲವಾರ್ ಹಾಗೂ ಅಕ್ಕಸಾಲಿಗ ವೃತ್ತಿಗೆ ಬಳಸುವ ಆಸಿಡ್ ಸೀಸೆಯನ್ನು ಹೊರತೆಗೆದಿದ್ದಾನೆ. ಅಂಗಡಿಯೊಳಗೇ ನವೀನ್ ಅವರ ಮೇಲೆ ಆಸಿಡ್ ಎರಚಿ, ತಲವಾರಿನಿಂದ ಭೀಕರವಾಗಿ ಹಲ್ಲೆ ನಡೆಸಿದ್ದಾನೆ. ಕೃತ್ಯ ಎಸಗಿದ ತಕ್ಷಣವೇ ಆರೋಪಿ ಅದೇ ಸ್ಕೂಟಿಯಲ್ಲಿ ಸ್ಥಳದಿಂದ ಪರಾರಿಯಾಗಿದ್ದನು. ಘಟನೆ ನಡೆದ ತಕ್ಷಣವೇ ಕಾರ್ಯಾಚರಣೆ ನಡೆಸಿದ ಉಡುಪಿ ನಗರ ಠಾಣೆಯ ಪೊಲೀಸರು ಆರೋಪಿ ಸುರೇಶ್ ಆಚಾರ್ಯನನ್ನು ವಶಕ್ಕೆ ಪಡೆದಿದ್ದಾರೆ. ಘಟನಾ ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಆರೋಪಿಯ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.








