ಮೂಡುಬಿದಿರೆ : ಮಂಗಳೂರು-ಕಾರ್ಕಳ ರಾಷ್ಟ್ರೀಯ ಹೆದ್ದಾರಿಯ ತೋಡಾರು ಎಂಬಲ್ಲಿ ಶುಕ್ರವಾರ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ವಿರುದ್ಧ ದಿಕ್ಕಿನಲ್ಲಿ ಅತಿಯಾದ ವೇಗವಾಗಿ ಬಂದ ಖಾಸಗಿ ಬಸ್ ದ್ವಿಚಕ್ರ ವಾಹನಕ್ಕೆ ಮುಖಾಮುಖಿ ಢಿಕ್ಕಿ ಹೊಡೆದ ಪರಿಣಾಮ 19 ವರ್ಷದ ಯುವಕನೊಬ್ಬ ದಾರುಣವಾಗಿ ಮೃತಪಟ್ಟಿದ್ದಾರೆ.
ತೋಡಾರು ನಿವಾಸಿ ರಿಫಾಝ್ (19) ದುರಂತದಲ್ಲಿ ಅಸುನೀಗಿದ ದುರ್ಭಾಗ್ಯಕರ ಯುವಕ. ಇವರು ಮೂಡುಬಿದಿರೆಯ ಹಣ್ಣು-ಹಂಪಲು ಮಾರಾಟದ ಅಂಗಡಿಯಲ್ಲಿ ಉದ್ಯೋಗಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು.
ಶುಕ್ರವಾರದಂದು ‘ಅಭಿಮಾನ್’ ಹೆಸರಿನ ಖಾಸಗಿ ಬಸ್ ಮಂಗಳೂರಿನಿಂದ ಮೂಡುಬಿದಿರೆ ಕಡೆಗೆ ಸಂಚರಿಸುತ್ತಿತ್ತು. ನಿಯಮದಂತೆ ಸರ್ವಿಸ್ ರಸ್ತೆಯ ಮೂಲಕ ಬರಬೇಕಾಗಿದ್ದ ಬಸ್ ಚಾಲಕ, ಅತಿಯಾದ ವೇಗ ಹಾಗೂ ತೀವ್ರ ಅಜಾಗರೂಕತೆಯಿಂದ ವಿರುದ್ಧ ದಿಕ್ಕಿನಲ್ಲಿ ಬಸ್ ಚಲಾಯಿಸಿಕೊಂಡು ಬಂದಿದ್ದಾನೆ.
ಈ ವೇಳೆ ತನ್ನ ದ್ವಿಚಕ್ರ ವಾಹನದಲ್ಲಿ ಸಂಚರಿಸುತ್ತಿದ್ದ ರಿಫಾಝ್ ಅವರಿಗೆ ಖಾಸಗಿ ಬಸ್ ನೇರವಾಗಿ ಮುಖಾಮುಖಿ ಢಿಕ್ಕಿ ಹೊಡೆದಿದೆ. ಭೀಕರ ಢಿಕ್ಕಿಯ ರಭಸಕ್ಕೆ ದ್ವಿಚಕ್ರ ವಾಹನ ಸಂಪೂರ್ಣ ನಜ್ಜುಗುಜ್ಜಾಗಿದ್ದು, ರಿಫಾಝ್ ರಸ್ತೆಗೆ ಬಿದ್ದು ತೀವ್ರ ಸ್ವರೂಪದ ಗಂಭೀರ ಗಾಯಗೊಂಡಿದ್ದರು. ತಕ್ಷಣವೇ ಸ್ಥಳೀಯರು ಅವರನ್ನು ಆಸ್ಪತ್ರೆಗೆ ರವಾನಿಸಲು ಯತ್ನಿಸಿದರಾದರೂ, ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯದಲ್ಲೇ ಚಿಕಿತ್ಸೆ ಫಲಕಾರಿಯಾಗದೆ ರಿಫಾಝ್ ಕೊನೆಯುಸಿರೆಳೆದಿದ್ದಾರೆ.








