ಮೂಡುಬಿದಿರೆ: ಹದಗೆಟ್ಟ ರಸ್ತೆಯನ್ನು ದುರಸ್ತಿ ಮಾಡಬೇಕೆಂದು ಆಗ್ರಹಿಸಿ ರಾಜ್ಯ ಹೆದ್ದಾರಿಯ ಮಧ್ಯದಲ್ಲಿ ಬೈಕ್ ನಿಲ್ಲಿಸಿ ವಾಹನ ಸಂಚಾರಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ಪುಚ್ಚಮೊಗರು ನಿವಾಸಿ ಪ್ರಶಾಂತ್ ಅಲಿಯಾಸ್ ಪಚ್ಚು (35) ಎಂಬಾತನನ್ನು ಮೂಡುಬಿದಿರೆ ಪೊಲೀಸರು ಬಂಧಿಸಿದ್ದಾರೆ.
ನವೆಂಬರ್ 2ರ ಸಂಜೆ ಸುಮಾರು 6.30ರ ಹೊತ್ತಿಗೆ ಮೂಡುಬಿದಿರೆ ಠಾಣಾ ವ್ಯಾಪ್ತಿಯ ಪ್ರಾಂತ್ಯ ಗ್ರಾಮದಲ್ಲಿರುವ ಮಹಾವೀರ ಕಾಲೇಜಿನ ಮಾರಿಗುಡಿ ಬಳಿ ಈ ಘಟನೆ ನಡೆದಿದೆ. ರಸ್ತೆಯಲ್ಲಿ ಗುಂಡಿಗಳು ಹೆಚ್ಚಾಗಿವೆ, ಅವುಗಳನ್ನು ತಕ್ಷಣ ಮುಚ್ಚಿ ಡಾಂಬರೀಕರಣ ಮಾಡಬೇಕು ಹಾಗೂ ಶಾಸಕರು, ಸಂಸದರು ಸೇರಿದಂತೆ ಜನಪ್ರತಿನಿಧಿಗಳು ಸ್ಥಳಕ್ಕೆ ಬರಬೇಕು ಎಂದು ಆತ ಒತ್ತಾಯಿಸಿದ್ದ ಎನ್ನಲಾಗಿದೆ. ಅದಕ್ಕಾಗಿ ತನ್ನ ಬೈಕ್ ಅನ್ನು ರಸ್ತೆಗೆ ಅಡ್ಡಲಾಗಿ ನಿಲ್ಲಿಸಿದ್ದ.
ಗುಂಡಿಗಳನ್ನು ಮುಚ್ಚುವವರೆಗೆ ಯಾವ ವಾಹನವನ್ನೂ, ಸಾರ್ವಜನಿಕರನ್ನೂ ಮುಂದೆ ಹೋಗಲು ಬಿಡುವುದಿಲ್ಲ ಎಂದು ಹೇಳಿ ಆತ ಗದ್ದಲ ಎಬ್ಬಿಸಿದ್ದಾನೆ. ಸಂಚಾರ ಸುಗಮಗೊಳಿಸಲು ಸ್ಥಳಕ್ಕೆ ಬಂದ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಯನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ, ಅಸಭ್ಯವಾಗಿ ವರ್ತಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಅಡಚಣೆಯಿಂದ ಮೂಡುಬಿದಿರೆ–ಬೆಳ್ತಂಗಡಿ ರಸ್ತೆಯ ಎರಡೂ ಕಡೆ ಸುಮಾರು ಒಂದು ಕಿ.ಮೀ. ಉದ್ದಕ್ಕೆ ವಾಹನಗಳ ಸಾಲು ನಿಂತಿತ್ತು. ಪ್ರಯಾಣಿಕರು ಮತ್ತು ಸಾರ್ವಜನಿಕರು ಸಾಕಷ್ಟು ತೊಂದರೆ ಅನುಭವಿಸಿದರು.
ಘಟನೆಗೆ ಸಂಬಂಧಿಸಿದಂತೆ ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 153/2026ರಡಿ ಭಾರತೀಯ ನ್ಯಾಯ ಸಂಹಿತೆಯ ಕಲಂ 126(2), 352 ಮತ್ತು 351(2) ಅಡಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಬಂಧಿಸಲಾಗಿದೆ.








