ಮಂಗಳೂರು: ದಕ್ಷಿಣ ಕನ್ನಡವನ್ನು ಆರೋಗ್ಯ ನಗರವನ್ನಾಗಿ ಮಾಡಲು ನಿರಂತರವಾಗಿ ಶ್ರಮಿಸುತ್ತಿರುವ ಆರೋಗ್ಯ ಸಚಿವ ಯು.ಟಿ. ಖಾದರ್ ಅವರಿಗೆ ಜನರಿಂದ ಮೆಚ್ಚುಗೆಯ ಮಹಾಪೂರ ಹರಿದುಬರುತ್ತಿದೆ. ಮಂಗಳೂರಿನಲ್ಲಿ ಸತತವಾಗಿ ನಡೆಯುತ್ತಿರುವ ಆಹಾರ ಸುರಕ್ಷತಾ ಇಲಾಖೆಯ ಅನಿರೀಕ್ಷಿತ ದಾಳಿಗಳು ಲೋಪ ಮಾಡಿದವರ ನಿದ್ದೆಗೆಡಿಸಿವೆ. ಹೋಟೆಲ್ ಒಂದೇ ಅಲ್ಲ, ಸಿಹಿ ತಿಂಡಿ ತಯಾರಕರು, ಆಹಾರ ಉತ್ಪಾದನಾ ಕಂಪನಿಗಳು, ರಿಟೇಲ್ ಸರಪಳಿಗಳು, ಆನ್ಲೈನ್ ಡೆಲಿವರಿ ವೇದಿಕೆಗಳು ಮತ್ತು ದೊಡ್ಡ ಫುಡ್ ಚೈನ್ಗಳು ಎಲ್ಲವೂ ಈಗ ಅಧಿಕಾರಿಗಳ ಕಣ್ಣಿಗೆ ಬಂದಿವೆ. ಬ್ರಾಂಡ್ ಎಷ್ಟೇ ದೊಡ್ಡದಾದರೂ ಲೋಪ ಕಂಡರೆ ಕ್ರಮ ಖಚಿತ ಎಂಬ ಸಂದೇಶ ಜೋರಾಗಿ ಕೇಳಿಸುತ್ತಿದೆ.
ಈ ಕಾರ್ಯಾಚರಣೆಯ ಹಿಂದೆ ಅತೀ ಶಿಸ್ತುಬದ್ಧವಾಗಿ, ಯಾವುದೇ ಒತ್ತಡಕ್ಕೆ ಮಣಿಯದೆ ಲೋಪಗಳನ್ನು ಪತ್ತೆ ಹಚ್ಚುವಲ್ಲಿ ತೊಡಗಿರುವ ಅಧಿಕಾರಿಗಳ ತಂಡವಿದೆ. ಹೋಟೆಲ್, ರೆಸ್ಟೊರೆಂಟ್, ರಿಟೇಲ್ ಮಳಿಗೆ ಮತ್ತು ಆಹಾರ ತಯಾರಿಕಾ ಘಟಕಗಳಲ್ಲಿ ಆರೋಗ್ಯ ಸಚಿವರ ಸೂಚನೆಯಂತೆ ಅಧಿಕಾರಿಗಳು ಅನಿರೀಕ್ಷಿತ ತಪಾಸಣೆ ನಡೆಸಿದರು. ಜನರಿಗೆ ಶುಚಿ-ರುಚಿಯಾದ ಮತ್ತು ಸುರಕ್ಷಿತ ಆಹಾರ ಸಿಗಬೇಕೆಂಬ ಛಲದಿಂದ ನಡೆಯುತ್ತಿರುವ ಯು.ಟಿ. ಖಾದರ್ ಅವರ ಈ ಪ್ರಯತ್ನಕ್ಕೆ ಸಾರ್ವಜನಿಕರಿಂದ ಭರ್ಜರಿ ಮೆಚ್ಚುಗೆ ವ್ಯಕ್ತವಾಗಿದೆ. ಜನರ ಆರೋಗ್ಯದ ಜೊತೆ ಚೆಲ್ಲಾಟವಾಡುವವರ ವಿರುದ್ಧ ಮುಲಾಜಿಲ್ಲದೆ ಕಠಿಣ ಕ್ರಮ ತೆಗೆದುಕೊಳ್ಳುವುದು ಇದುವೇ ಖಾದರ್ ಸ್ಟೈಲ್.
ಸಣ್ಣ ಮಕ್ಕಳು ಇಷ್ಟಪಟ್ಟು ತಿನ್ನುವ ಐಸ್ ಕ್ರೀಮ್ನಿಂದ ಹಿಡಿದು ಎಲ್ಲಾ ಆಹಾರ ಪದಾರ್ಥಗಳ ಮೇಲೆ ಅಧಿಕಾರಿಗಳು ಹದ್ದಿನ ಕಣ್ಣಿಟ್ಟಿದ್ದಾರೆ. KFC ನಂತಹ ದೊಡ್ಡ ದೊಡ್ಡ ಆಹಾರ ಮಳಿಗೆಗಳ ಮೇಲೂ ಮುಲಾಜಿಲ್ಲದೆ ದಾಳಿ ನಡೆಸಿ, ಜನರ ಸುರಕ್ಷತೆಗೆ ಮೊದಲ ಆದ್ಯತೆ ನೀಡಲಾಗುತ್ತಿದೆ. ನಗರದ ಸಿಟಿ ಸೆಂಟರ್ ಮಾಲ್ನಲ್ಲಿರುವ KFC ಮಳಿಗೆಗೆ ಅಧಿಕಾರಿಗಳು ದಿಢೀರ್ ದಾಳಿ ನಡೆಸಿದರು. ಗ್ರಾಹಕರ ದೂರಿನ ಬಳಿಕ ಆ ಮಳಿಗೆಯನ್ನು ಮುಚ್ಚಿ ಸೀಲ್ ಮಾಡಲಾಗಿದ್ದು, ಮಾದರಿಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಇದಕ್ಕೆ ಪ್ರತಿಕ್ರಿಯಿಸಿದ KFC ಸಂಸ್ಥೆ, ತಾನು FSSAI ಮಾನದಂಡಗಳನ್ನು ಪಾಲಿಸುತ್ತಿರುವುದಾಗಿ ಹೇಳಿ ಆರೋಪಗಳನ್ನು ತಳ್ಳಿಹಾಕಿದೆ. ಪ್ರಯೋಗಾಲಯದ ವರದಿ ಬಂದ ಮೇಲೆ ಸತ್ಯ ಹೊರಬೀಳಲಿದೆ. ಅದೇ ರೀತಿ, ಫಳ್ನೀರ್ನ ಬ್ಲಿಂಕಿಟ್ ಡಾರ್ಕ್ ಸ್ಟೋರ್ನಿಂದ ಹುಳು ಇರುವ ಮೊಟ್ಟೆ ಬಂದಿದೆ ಎಂದು ಗ್ರಾಹಕರು ಸಚಿವರಿಗೆ ದೂರು ನೀಡಿದ ಬಳಿಕ, ಅಧಿಕಾರಿಗಳು ದಾಳಿ ನಡೆಸಿ ಆಹಾರ ಸಂಗ್ರಹ ಜಾಗವನ್ನು ತಾತ್ಕಾಲಿಕವಾಗಿ ಸೀಲ್ ಮಾಡಿದರು. ಒಬ್ಬ ಗ್ರಾಹಕನ ದೂರಿಗೂ ಸರ್ಕಾರ ಕಿವಿಗೊಡುತ್ತದೆ ಎಂಬುದಕ್ಕೆ ಇದು ಸಾಕ್ಷಿ.
ಖಾದರ್ ಅವರ ನಿಲುವು ಸ್ಪಷ್ಟ. ಜನರು ಹಣ ಕೊಟ್ಟು ತಿನ್ನುವ ಆಹಾರ ಅವರನ್ನು ಐಸಿಯುಗೆ ತಲುಪಿಸಬಾರದು, ಲಾಭಕ್ಕಿಂತ ಸುರಕ್ಷತೆ ಮುಖ್ಯ ಎಂಬುದು ಅವರ ಕಿವಿಮಾತು. ಕರ್ನಾಟಕವನ್ನು ಆರೋಗ್ಯಕರ ರಾಜ್ಯವನ್ನಾಗಿ ಮಾಡುವುದೇ ತಮ್ಮ ಮುಖ್ಯ ಗುರಿ ಎಂದೂ ಅವರು ಹೇಳಿದ್ದಾರೆ. ತಮ್ಮ ತವರು ಜಿಲ್ಲೆಯಲ್ಲೂ ಲೋಪದೋಷಗಳಿರುವ ಆಹಾರಗಳನ್ನು ತೊಡೆದುಹಾಕಲು ಪಣತೊಟ್ಟಿರುವ ಅವರು, ದೂರು ನೀಡಲು QR ಕೋಡ್ ವ್ಯವಸ್ಥೆಯನ್ನೂ ಆರಂಭಿಸಿದ್ದಾರೆ. ತಪಾಸಣೆಯನ್ನು ಹಾಸ್ಟೆಲ್, ಶಿಕ್ಷಣ ಸಂಸ್ಥೆ, ರೈಲ್ವೆ ಕ್ಯಾಂಟೀನ್ ಮತ್ತು ವಿಮಾನ ಕ್ಯಾಟರಿಂಗ್ಗೂ ವಿಸ್ತರಿಸಲಾಗುತ್ತಿದೆ. ಝೆಪ್ಟೋ, ಝೊಮ್ಯಾಟೊ ಹಾಗೂ KFC, ಮೆಕ್ಡೊನಾಲ್ಡ್ಸ್, ಡೊಮಿನೋಸ್, ಬರ್ಗರ್ ಕಿಂಗ್ನಂತಹ ಬಹುರಾಷ್ಟ್ರೀಯ ಸರಪಳಿಗಳೂ ತಪಾಸಣೆಗೆ ಒಳಪಟ್ಟಿವೆ ಎಂದು ಅವರು ಹೇಳಿದ್ದಾರೆ.
ಆಹಾರ ಕಲಬೆರಕೆ, ಕಳಪೆ ಗುಣಮಟ್ಟ ಹಾಗೂ ಅಸುರಕ್ಷಿತ ಆಹಾರ ಪದಾರ್ಥಗಳ ಸೇವನೆಯಿಂದ ಉಂಟಾಗಬಹುದಾದ ಆರೋಗ್ಯ ಸಮಸ್ಯೆಗಳನ್ನು ತಡೆಗಟ್ಟಲು ಇಂತಹ ಕಾರ್ಯಾಚರಣೆಗಳು ಮಹತ್ವದ ಪಾತ್ರ ವಹಿಸಬಹುದು. ಇದೇ ಮಾದರಿಯ ಕಟ್ಟುನಿಟ್ಟಿನ ತಪಾಸಣೆ ರಾಜ್ಯದಾದ್ಯಂತ ಮುಂದುವರಿದರೆ ಆಹಾರ ಸುರಕ್ಷತೆಯ ಬಗ್ಗೆ ವ್ಯಾಪಕ ಜಾಗೃತಿ ಮೂಡುವುದರ ಜೊತೆಗೆ ಸಾರ್ವಜನಿಕರ ಆರೋಗ್ಯ ರಕ್ಷಣೆಗೆ ಮತ್ತಷ್ಟು ಬಲ ಸಿಗಲಿದೆ ಎಂಬ ನಿರೀಕ್ಷೆ ಜನರಲ್ಲಿದೆ.
ಇಲ್ಲಿಯವರೆಗೆ ಮೆಕ್ಡೊನಾಲ್ಡ್ಸ್, KFC, ಸೂರಜ್ ಇಂಟರ್ನ್ಯಾಷನಲ್ ಹೋಟೆಲ್, ಸುರತ್ಕಲ್ ಮತ್ತು ಕುಡ್ಪಿಸ್ ಫುಡ್ಸ್, ಸುರತ್ಕಲ್ನ ಬ್ಲಿಂಕಿಟ್ ಡಾರ್ಕ್ ಸ್ಟೋರ್, ಸುರತ್ಕಲ್ನ ಮೋರ್ ರಿಟೇಲ್, ಕೊಳ್ಯದ ಐಡಿಯಲ್ ಐಸ್ ಕ್ರೀಮ್ ಶೀತಲ ಘಟಕ ಹಾಗೂ ಉಡುಪಿ ಕೆಫೆಯಲ್ಲಿ M.R. ಸ್ವೀಟ್ಸ್, ಫಾರ್ಚೂನ್ ಇಂಡಸ್ಟ್ರೀಸ್ ತಪಾಸಣೆ ನಡೆದಿದೆ.
ಹಿಂದೆಂದೂ ಯಾವ ಅಧಿಕಾರಿಗಳೂ ಇಷ್ಟೊಂದು ಮುಲಾಜಿಲ್ಲದೆ ಕರ್ತವ್ಯ ನಿರ್ವಹಿಸಿದ್ದೇ ಇಲ್ಲ ಎಂಬ ಮಾತು ಈಗ ಮಂಗಳೂರಿನ ಜನರಲ್ಲಿ ಕೇಳಿಬರುತ್ತಿದೆ. ಬ್ರಾಂಡ್ ಎಷ್ಟೇ ದೊಡ್ಡದಿರಲಿ, ಲೋಪ ಕಂಡರೆ ಕ್ರಮ ಖಚಿತ ಎಂಬ ಛಲದೊಂದಿಗೆ ಅಧಿಕಾರಿಗಳ ತಂಡ ಕೆಲಸ ಮಾಡುತ್ತಿದ್ದು, ಇದರ ಹಿಂದಿನ ಶಕ್ತಿ ಆರೋಗ್ಯ ಸಚಿವ ಯು.ಟಿ. ಖಾದರ್. ತನ್ನ ಜಿಲ್ಲೆಯಿಂದಲೇ ಹೆಜ್ಜೆಯಿಟ್ಟು, ಇಂತಹ ಲೋಪದೋಷಗಳಿರುವ ಆಹಾರಗಳನ್ನು ತೊಡೆದು ಹಾಕಲು ಪಣತೊಟ್ಟಿರುವ ಯು.ಟಿ. ಖಾದರ್ ಅವರ ಈ ನಡೆಗೆ ಸಾರ್ವಜನಿಕರಿಂದ ಭರ್ಜರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.ಹೀಗೆಯೇ ಕರ್ನಾಟಕದಾದ್ಯಂತ ಮುಂದುವರಿದರೆ, ಆಹಾರದಿಂದ ಬರುವ ಕ್ಯಾನ್ಸರ್ನಂತಹ ದೊಡ್ಡ ರೋಗಗಳು ಕಡಿಮೆಯಾಗಬಹುದು ಎಂಬ ನಿರೀಕ್ಷೆ ಜನರಲ್ಲಿದೆ.








