ಉಡುಪಿ : ಬ್ರಹ್ಮಾವರ ತಾಲೂಕಿನ ಕುಂಜಾಲು ಗ್ರಾಮದ ಆರೂರು ತೆಂಕುಬೆಟ್ಟು ಪ್ರದೇಶದಲ್ಲಿ ಒಣಹುಲ್ಲು ಸಾಗಿಸುತ್ತಿದ್ದ ಲಾರಿಗೆ ವಿದ್ಯುತ್ ತಂತಿ ತಗುಲಿ ಬೆಂಕಿ ಕಾಣಿಸಿಕೊಂಡ ಘಟನೆ ವರದಿಯಾಗಿದೆ. ಅದೃಷ್ಟವಶಾತ್ ಚಾಲಕನ ಸಮಯಪ್ರಜ್ಞೆಯಿಂದ ದೊಡ್ಡ ಮಟ್ಟದ ಅನಾಹುತ ಹಾಗೂ ಪ್ರಾಣಾಪಾಯ ತಪ್ಪಿದೆ. ಲಾರಿಯಲ್ಲಿ ಒಣಹುಲ್ಲಿನ ಮೂಟೆಗಳನ್ನು ತುಂಬಿಕೊಂಡು ಸಾಗಿಸುತ್ತಿದ್ದ ವೇಳೆ, ರಸ್ತೆಯ ಮೇಲ್ಭಾಗದಲ್ಲಿ ಹಾದುಹೋಗಿದ್ದ ವಿದ್ಯುತ್ ತಂತಿ ಹುಲ್ಲಿಗೆ ಬಡಿದಿದೆ. ಪರಿಣಾಮ ಒಣಹುಲ್ಲಿಗೆ ಏಕಾಏಕಿ ಬೆಂಕಿ ಹೊತ್ತಿಕೊಂಡಿದೆ.
ಲಾರಿಗೆ ಬೆಂಕಿ ಹತ್ತಿಕೊಳ್ಳುತ್ತಿದ್ದಂತೆ ಎಚ್ಚೆತ್ತಕೊಂಡ ಚಾಲಕ ತಕ್ಷಣವೇ ಸಮಯಪ್ರಜ್ಞೆ ಮೆರೆದಿದ್ದಾರೆ. ಕೂಡಲೇ ಬೆಂಕಿ ಕಾಣಿಸಿಕೊಂಡಿದ್ದ ಎರಡು ಹುಲ್ಲಿನ ಮೂಟೆಗಳನ್ನು ಲಾರಿಯಿಂದ ರಸ್ತೆಗೆ ಕೆಳಗೆ ಎಸೆದಿದ್ದಾರೆ. ಅಲ್ಲದೆ ಬಳಿಕ ಲಾರಿಯನ್ನು ಸಮೀಪದ ಕ್ರೀಡಾಂಗಣದ (ಗ್ರೌಂಡ್) ಬಳಿಗೆ ಕೊಂಡೊಯ್ದು ನೀರು ಹಾಯಿಸಿ ಬೆಂಕಿ ನಂದಿಸಲು ಪ್ರಯತ್ನಿಸಿದ್ದಾರೆ. ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಧಾವಿಸಿದ ಉಡುಪಿ ಅಗ್ನಿಶಾಮಕ ದಳದ ಸಿಬ್ಬಂದಿ, ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಿ ಪರಿಸ್ಥಿತಿಯನ್ನು ಸಂಪೂರ್ಣ ನಿಯಂತ್ರಣಕ್ಕೆ ತಂದಿದ್ದಾರೆ.
ಚಾಲಕನ ಈ ದಿಟ್ಟ ಹಾಗೂ ಸಮಯೋಚಿತ ನಿರ್ಧಾರದಿಂದ ಇಡೀ ಲಾರಿಗೆ ಬೆಂಕಿ ಹಬ್ಬುವುದು ತಪ್ಪಿದ್ದು, ಸಂಭವಿಸಬಹುದಾಗಿದ್ದ ಭಾರಿ ಅನಾಹುತ ಹಾಗೂ ಪ್ರಾಣಾಪಾಯ ತಪ್ಪಿದಂತಾಗಿದೆ. ಘಟನೆಯಲ್ಲಿ ಅಂದಾಜು ₹1.5 ಲಕ್ಷಕ್ಕೂ ಅಧಿಕ ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ.








