ಮಧ್ಯಪ್ರಾಚ್ಯದಲ್ಲಿ ಅಮೆರಿಕ ಮತ್ತು ಇರಾನ್ ನಡುವಿನ ಮಿಲಿಟರಿ ಸಮರ ಮತ್ತೆ ತೀವ್ರರೂಪ ಪಡೆದುಕೊಂಡ ಬೆನ್ನಲ್ಲೇ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಭಾರಿ ಜಿಗಿತ ಕಂಡಿದೆ. ಇದು ಭಾರತ ಸೇರಿದಂತೆ ಪ್ರಮುಖ ತೈಲ ಆಮದುದಾರ ರಾಷ್ಟ್ರಗಳಲ್ಲಿ ಆತಂಕ ಮೂಡಿಸಿದೆ.
ಅಂತರರಾಷ್ಟ್ರೀಯ ತೈಲ ಮಾನದಂಡವಾಗಿರುವ ಬ್ರೆಂಟ್ ಕಚ್ಚಾ ತೈಲ ಬೆಲೆಯು ಶೇಕಡಾ 1.2 ಏರಿಕೆಯಾಗಿದ್ದು, ಪ್ರತಿ ಬ್ಯಾರಲ್‌ಗೆ 92.09 ಡಾಲರ್‌ಗೆ ತಲುಪಿದೆ. ಇದು ಜೂನ್ ತಿಂಗಳ ಬಳಿಕ ದಾಖಲಾದ ಗರಿಷ್ಠ ದರವಾಗಿದೆ. ಅದೇ ರೀತಿ ಅಮೆರಿಕದ ಪ್ರಮುಖ ಕಚ್ಚಾ ತೈಲ ಮಾನದಂಡವಾದ ಡಬ್ಲೂಟಿಐ ದರ ಕೂಡ ಶೇ.1.1 ರಷ್ಟು ಹೆಚ್ಚಾಗಿದ್ದು, ಪ್ರತಿ ಬ್ಯಾರಲ್‌ಗೆ 85.23 ಡಾಲರ್‌ಗೆ ತಲುಪಿದೆ.
ವಿಶ್ವದ ಸುಮಾರು ಶೇ. 20 ರಷ್ಟು ತೈಲ ಸಾಗಣೆಯಾಗುವ ಪ್ರಮುಖ ಸಮುದ್ರ ಮಾರ್ಗವಾದ ಹಾರ್ಮುಜ್ ಜಲಸಂಧಿಯಲ್ಲಿ (ಇರಾನ್ ತೈಲ ಟ್ಯಾಂಕರ್‌ಗಳನ್ನು ತಡೆದು ದಾಳಿ ನಡೆಸಿದೆ. ಅಮೆರಿಕದ ಸೇನಾ ನೆಲೆ ಹಾಗೂ ರೇಡಾರ್ ಕೇಂದ್ರಗಳನ್ನು ಗುರಿಯಾಗಿಸಿ ಇರಾನ್ ಸರಣಿ ದಾಳಿ ನಡೆಸಿದ್ದರೆ, ಪ್ರತಿಯಾಗಿ ಅಮೆರಿಕ ಪಡೆಗಳು ಕೂಡ ಇರಾನ್ ಆಸ್ತಿಗಳ ಮೇಲೆ ಬಾಂಬ್ ದಾಳಿ ನಡೆಸುತ್ತಿವೆ. ಈ ಮಿಲಿಟರಿ ಘರ್ಷಣೆಯಿಂದ ಜಾಗತಿಕ ತೈಲ ಪೂರೈಕೆಯಲ್ಲಿ ಭಾರಿ ವ್ಯತ್ಯಯ ಉಂಟಾಗುವ ಭೀತಿ ಎದುರಾಗಿದೆ.
ಕಳೆದ ಜೂನ್ ಕೊನೆಯ ವಾರದಲ್ಲಿ ಉಭಯ ದೇಶಗಳ ನಡುವೆ ಕದನ ವಿರಾಮ ಘೋಷಣೆಯಾದಾಗ ತೈಲ ದರ ಬ್ಯಾರಲ್‌ಗೆ 70 ಡಾಲರ್‌ಗೆ ಇಳಿಕೆಯಾಗಿತ್ತು. ಆದರೆ ಪ್ರಸ್ತುತ ತೈಲ ಬೆಲೆ ಸತತವಾಗಿ 90 ಡಾಲರ್ ಗಡಿ ದಾಟಿ ಮುನ್ನುಗುತ್ತಿರುವುದರಿಂದ ಸಾರಿಗೆ ವೆಚ್ಚ ಹೆಚ್ಚಾಗಿ ಜಾಗತಿಕ ಹಣದುಬ್ಬರ ಮತ್ತೆ ಏರಿಕೆಯಾಗುವ ಸಾಧ್ಯತೆಯಿದೆ. ಪರಿಣಾಮವಾಗಿ ಏಷ್ಯನ್ ಷೇರು ಮಾರುಕಟ್ಟೆಗಳಲ್ಲಿಯೂ ಅಸ್ಥಿರತೆ ಉಂಟಾಗಿದ್ದು, ಮುಂಬರುವ ದಿನಗಳಲ್ಲಿ ಭಾರತದಲ್ಲೂ ಪೆಟ್ರೋಲ್ ಮತ್ತು ಡೀಸೆಲ್ ದರಗಳ ಮೇಲೆ ನಕಾರಾತ್ಮಕ ಪ್ರಭಾವ ಬೀರಬಹುದು.








