ಕಡಬ : ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ನೆಲ್ಯಾಡಿ ಪೇಟೆಯಲ್ಲಿ ರಸ್ತೆ ಬದಿ ನಿಲ್ಲಿಸಲಾಗಿದ್ದ ಲಾರಿಯೊಂದರಿಂದ ಬರೋಬ್ಬರಿ 400 ಲೀಟರ್ ಡೀಸೆಲ್ ಅನ್ನು ಕಳ್ಳರು ಕಳವು ಮಾಡಿರುವ ಘಟನೆ ಬೆಳಕಿಗೆ ಬಂದಿದೆ.
ಮಂಗಳೂರು ಕಡೆಯಿಂದ ಬಾಕ್ಸೈಟ್ ಲೋಡ್ ತುಂಬಿಸಿಕೊಂಡು ಹೋಗುತ್ತಿದ್ದ ಲಾರಿಯ ಚಾಲಕ, ರಾತ್ರಿ ನೆಲ್ಯಾಡಿ ಪೇಟೆಯ ರಸ್ತೆ ಬದಿಯಲ್ಲಿ ಲಾರಿಯನ್ನು ನಿಲ್ಲಿಸಿ ಮನೆಗೆ ತೆರಳಿದ್ದರು. ಮರುದಿನ ಬೆಳಿಗ್ಗೆ ಬಂದು ಲಾರಿ ಚಾಲನೆ ಮಾಡಲು ಯತ್ನಿಸಿದಾಗ ಡೀಸೆಲ್ ಖಾಲಿಯಾಗಿ ರಸ್ತೆಯಲ್ಲೇ ನಿಂತಿದೆ. ಪರಿಶೀಲಿಸಿದಾಗ ಲಾರಿಯ ಟ್ಯಾಂಕ್‌ನಲ್ಲಿದ್ದ 400 ಲೀಟರ್‌ಗೂ ಅಧಿಕ ಡೀಸೆಲ್ ಅನ್ನು ಕಳ್ಳರು ಕದ್ದು ಪರಾರಿಯಾಗಿರುವುದು ಕಂಡುಬಂದಿದೆ. ಘಟನೆಗೆ ಸಂಬಂಧಿಸಿದಂತೆ ಕಡಬ/ಉಪ್ಪಿನಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ








