ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಆಪ್ತ ಕಾರ್ಯದರ್ಶಿ (ಪಿಎ) ಎಂದು ಸುಳ್ಳು ಹೇಳಿ, ರಿಕ್ರಿಯೇಷನ್ ಕ್ಲಬ್ ಲೈಸೆನ್ಸ್ ಕೊಡಿಸುವುದಾಗಿ ನಂಬಿಸಿ 15 ಲಕ್ಷ ರೂಪಾಯಿ ಪಡೆದು ವಂಚಿಸಿದ್ದ ವ್ಯಕ್ತಿಯೊಬ್ಬನನ್ನು ತುಂಗಾನಗರ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಹೇಮಂತ್ ಕುಮಾರ್ ಅಲಿಯಾಸ್ ಗಣೇಶ್ (30) ಎಂದು ಗುರುತಿಸಲಾಗಿದೆ. ವಂಚನೆಗೆ ಒಳಗಾದ ಮಂಜುನಾಥ್ ಹಂಜಿ ನೀಡಿದ ದೂರಿನನ್ವಯ ತುಂಗಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ದೂರುದಾರ ಮಂಜುನಾಥ್ ಹಂಜಿ ಅವರೊಂದಿಗೆ ಆರಂಭದಲ್ಲಿ ಸಲುಗೆ ಬೆಳೆಸಿಕೊಂಡಿದ್ದ ಹೇಮಂತ್ ಕುಮಾರ್, ತಾನು ಉಪಮುಖ್ಯಮಂತ್ರಿಗಳ ಪಿಎ ಎಂದು ಪರಿಚಯಿಸಿಕೊಂಡಿದ್ದ. ವಾರದಲ್ಲಿ ನಾಲ್ಕು ದಿನ ಬೆಂಗಳೂರಿನಲ್ಲಿ ಹಾಗೂ ಎರಡು ದಿನ ಶಿವಮೊಗ್ಗದಲ್ಲಿ ಕಾರ್ಯನಿರ್ವಹಿಸುವುದಾಗಿ ನಂಬಿಸಿದ್ದ. ಅಷ್ಟೇ ಅಲ್ಲದೆ, ತನ್ನ ಪ್ರಭಾವವನ್ನು ತೋರಿಸಿಕೊಳ್ಳಲು ನಾಲ್ಕು ಮಂದಿ ಗನ್ ಮ್ಯಾನ್ ಮಾದರಿಯ ಸ್ನೇಹಿತರನ್ನು ಜೊತೆಯಲ್ಲಿಟ್ಟುಕೊಂಡು ಕಾರಿನಲ್ಲಿ ಓಡಾಡುತ್ತಾ ಭಾರಿ ಪ್ರಭಾವಿ ಎಂಬಂತೆ ಬಿಂಬಿಸಿಕೊಂಡಿದ್ದ.
ಈ ನಡುವೆ, ಸ್ನೇಹಿತರೆಲ್ಲ ಸೇರಿ ಹಣ ಹೂಡಿಕೆ ಮಾಡಿ ರಿಕ್ರಿಯೇಷನ್ ಕ್ಲಬ್ ಪ್ರಾರಂಭಿಸೋಣ, ನಾನು ಹಿರಿಯ ಅಧಿಕಾರಿಗಳು ಹಾಗೂ ಸರ್ಕಾರದ ಮಟ್ಟದಲ್ಲಿ ಮಾತನಾಡಿ ಲೈಸೆನ್ಸ್ ಕೊಡಿಸುವುದಾಗಿ ಹೇಮಂತ್ ಆಮಿಷ ಒಡ್ಡಿದ್ದ. ಕೆಲ ದಿನಗಳ ನಂತರ, “ನನ್ನ ಸ್ನೇಹಿತರು ಸರಿಯಿಲ್ಲ, ಅವರನ್ನು ಹೊರಗಿಟ್ಟು ನಾವಿಬ್ಬರೇ ಕ್ಲಬ್ ಮಾಡೋಣ” ಎಂದು ನಂಬಿಸಿ, ಲೈಸೆನ್ಸ್ ವೆಚ್ಚಕ್ಕಾಗಿ ಮಂಜುನಾಥ್ ಹಂಜಿ ಅವರಿಂದ ಹಂತ-ಹಂತವಾಗಿ ಒಟ್ಟು 15 ಲಕ್ಷ ರೂಪಾಯಿ ಪಡೆದುಕೊಂಡಿದ್ದ.
ಹಣ ಪಡೆದ ನಂತರ ಕ್ಲಬ್ ಲೈಸೆನ್ಸ್ ಕೊಡಿಸದೇ ಕಳೆದ ಮೂರು ತಿಂಗಳಿನಿಂದ ದಿನಕ್ಕೊಂದು ನೆಪ ಹೇಳುತ್ತಾ ಸತಾಯಿಸುತ್ತಿದ್ದ. ಹಣ ವಾಪಸ್ ಕೇಳಿದಾಗಲೆಲ್ಲಾ ಸುಳ್ಳು ಸಮಜಾಯಿಷಿ ನೀಡುತ್ತಿದ್ದ ಆರೋಪಿಯ ವರ್ತನೆಯಿಂದ ಅನುಮಾನಗೊಂಡ ದೂರುದಾರರು ತಕ್ಷಣವೇ ತುಂಗಾನಗರ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದರು. ಪ್ರಕರಣ ಕೈಗೆತ್ತಿಕೊಂಡ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದು, ಮುಂದಿನ ತನಿಖೆ ಕೈಗೊಂಡಿದ್ದಾರೆ.








