ನವದೆಹಲಿ: ದೇಶದ 28 ರಾಜ್ಯಗಳಲ್ಲಿ 14 ರಾಜ್ಯಗಳ ಮುಖ್ಯಮಂತ್ರಿಗಳ ವಿರುದ್ಧ ಗಂಭೀರ ಕ್ರಿಮಿನಲ್ ಪ್ರಕರಣಗಳು ಬಾಕಿ ಇವೆ. ಈ ಪಟ್ಟಿಯಲ್ಲಿ ತೆಲಂಗಾಣ ಸಿಎಂ ಎ. ರೇವಂತ್ ರೆಡ್ಡಿ ವಿರುದ್ಧ 89 ಪ್ರಕರಣಗಳು ಬಾಕಿ ಇದ್ದು ಮೊದಲ ಸ್ಥಾನದಲ್ಲಿದ್ದಾರೆ ಎಂದು ವರದಿ ತಿಳಿಸಿದೆ.
ತೆಲಂಗಾಣ ಸಿಎಂ ಎ. ರೇವಂತ್ ರೆಡ್ಡಿ ವಿರುದ್ಧ 89 ಪ್ರಕರಣಗಳು, ಪಶ್ಚಿಮ ಬಂಗಾಳ ಸಿಎಂ ಸುವೇಂದು ಅಧಿಕಾರಿ ವಿರುದ್ಧ 29 ಪ್ರಕರಣಗಳು, ಕರ್ನಾಟಕ ಸಿಎಂ ಡಿ.ಕೆ. ಶಿವಕುಮಾರ್ ಹಾಗೂ ಆಂಧ್ರಪ್ರದೇಶ ಸಿಎಂ ಎನ್. ಚಂದ್ರಬಾಬು ನಾಯ್ಡು ವಿರುದ್ಧ 19 ಪ್ರಕರಣಗಳು, ಕೇರಳ ಸಿಎಂ ವಿ.ಡಿ. ಸತೀಶನ್ 18 ಪ್ರಕರಣಗಳು, ಜಾರ್ಖಂಡ್ ಸಿಎಂ ಹೇಮಂತ್ ಸೊರೇನ್ ವಿರುದ್ಧ 5 ಪ್ರಕರಣಗಳು ಬಾಕಿ ಇವೆ ಎಂದು ಸುಪ್ರೀಂ ಕೋರ್ಟ್‌ಗೆ ಅಮಿಕಸ್ ಕ್ಯುರಿಯೆ ಹಾಗೂ ಹಿರಿಯ ವಕೀಲ ವಿಜಯ್ ಹನ್ಸಾರಿಯಾ ಮಹತ್ವದ ವರದಿ ಸಲ್ಲಿಸಿದ್ದಾರೆ.
ಜೊತೆಗೆ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ ಹಾಗೂ ಹಿಮಾಚಲ ಪ್ರದೇಶ ಸಿಎಂ ಸುಖವಿಂದರ್ ಸಿಂಗ್ ವಿರುದ್ಧ ತಲಾ 4 ಪ್ರಕರಣಗಳು, ತಮಿಳುನಾಡು ಸಿಎಂ ಸಿ. ಜೋಸೆಫ್ ವಿಜಯ್ ವಿರುದ್ಧ 2 ಪ್ರಕರಣಗಳು, ಬಿಹಾರ ಸಿಎಂ ಸಮ್ರಾಟ್ ಚೌಧರಿ ವಿರುದ್ಧ 2 ಪ್ರಕರಣಗಳು, ಸಿಕ್ಕಿಂ ಸಿಎಂ ಪಿ.ಎಸ್. ತಮಾಂಗ್, ಪಂಜಾಬ್ ಸಿಎಂ ಭಗವಂತ್ ಮಾನ್, ಒಡಿಶಾ ಸಿಎಂ ಮೋಹನ್ ಚರಣ್ ಮಾಝಿ, ರಾಜಸ್ಥಾನ ಸಿಎಂ ಭಜನ್ ಲಾಲ್ ಶರ್ಮಾ ವಿರುದ್ಧ ತಲಾ 1 ಪ್ರಕರಣ ಬಾಕಿ ಇದೆ.
ಇನ್ನು ಗಂಭೀರ ಕ್ರಿಮಿನಲ್ ಪ್ರಕರಣಗಳನ್ನು ಎದುರಿಸುತ್ತಿರುವ ಶಾಸಕರ ಪ್ರಮಾಣದಲ್ಲಿ ಪಶ್ಚಿಮ ಬಂಗಾಳದ 170 (58%) ಶಾಸಕರ ಮೇಲೆ ಕ್ರಿಮಿನಲ್ ಪ್ರಕರಣಗಳಿದ್ದು, ಅಗ್ರಸ್ಥಾನದಲ್ಲಿದೆ. ಉಳಿದಂತೆ ಕೇರಳದ 57%, ಆಂಧ್ರಪ್ರದೇಶ 56%, ತೆಲಂಗಾಣ 49%, ಜಾರ್ಖಂಡ್ 45%, ಒಡಿಶಾ 45%, ಬಿಹಾರದ 42%, ಮಹಾರಾಷ್ಟ್ರದ 40% ಶಾಸಕರ ಮೇಲೆ ಪ್ರಕರಣಗಳಿವೆ.
543 ಸದಸ್ಯರ ಲೋಕಸಭೆಯಲ್ಲಿ 170 ಸಂಸದರ (31%) ವಿರುದ್ಧ ಗಂಭೀರ ಕ್ರಿಮಿನಲ್ ಪ್ರಕರಣಗಳು ಬಾಕಿ ಇವೆ. 233 ಸದಸ್ಯರ ರಾಜ್ಯಸಭೆಯಲ್ಲಿ 75 ಸದಸ್ಯರ (33%) ವಿರುದ್ಧ ಕ್ರಿಮಿನಲ್ ಪ್ರಕರಣಗಳು ಇದ್ದು, ಅವರಲ್ಲಿ 40 ಸದಸ್ಯರ (18%) ವಿರುದ್ಧ 5 ವರ್ಷ ಅಥವಾ ಅದಕ್ಕಿಂತ ಹೆಚ್ಚು ಶಿಕ್ಷೆಗೆ ಒಳಪಡುವ ಗಂಭೀರ ಪ್ರಕರಣಗಳು ಬಾಕಿ ಇವೆ ಎಂದು ವರದಿ ಹೇಳಿದೆ.








