ಉಡುಪಿ : ಅಮೆಜಾನ್ ಕಂಪನಿಯ ಆನ್‌ಲೈನ್ ಡೆಲಿವರಿ ಹಬ್ ಫ್ರಾಂಚೈಸಿ ಕೊಡುಸುವುದಾಗಿ ನಂಬಿಸಿ ಉಡುಪಿ ತಾಲೂಕಿನ ನಾಲ್ಕೂರು ಗ್ರಾಮದ ವ್ಯಕ್ತಿಯೊಬ್ಬರಿಗೆ ₹4.20 ಲಕ್ಷ ಹಣ ಪಡೆದು ವಂಚಿಸಿರುವ ಘಟನೆ ಬೆಳಕಿಗೆ ಬಂದಿದ್ದು, ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಾಲ್ಕೂರು ಗ್ರಾಮದ ರವಿಚಂದ್ರ (48) ವಂಚನೆಗೊಳಗಾದ ವ್ಯಕ್ತಿ. ಈ ಸಂಬಂಧ ಎಮ್. ಸಾಯಿಕೃಷ್ಣ, ಎಮ್. ಗುರುಸ್ವಾಮಿ, ಸುರೇಶ್ ಕುಮಾರ್, ರಾಜ್ ಕುಮಾರ್ ಹಾಗೂ ಮಹೇಶ್ ಎಂಬ ಐವರು ಆರೋಪಿಗಳ ವಿರುದ್ಧ ಮಣಿಪಾಲ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ದೂರುದಾರ ರವಿಚಂದ್ರ ಅವರಿಗೆ ಜೂನ್ 29, 2026 ರಂದು ಕರೆ ಮಾಡಿದ್ದ ಆರೋಪಿ ಎಮ್. ಸಾಯಿಕೃಷ್ಣ, ಉಡುಪಿ ಮಣಿಪಾಲದ ಅಲೆವೂರು ರಸ್ತೆಯಲ್ಲಿರುವ ಬಾಳಿಗಾ ಕಾಂಪ್ಲೆಕ್ಸ್‌ನಲ್ಲಿ ಅಮೆಜಾನ್ ಆನ್‌ಲೈನ್ ಹಬ್ ಫ್ರಾಂಚೈಸಿ ಕೊಡಿಸುವುದಾಗಿ ಹೇಳಿದ್ದ. ಆರಂಭದಲ್ಲಿ ರವಿಚಂದ್ರ ಅವರು ಫ್ರಾಂಚೈಸಿ ಬೇಡವೆಂದು ಕರೆ ಕಡಿತಗೊಳಿಸಿದ್ದರು.
ಆದರೆ, ಬಿಡದ ಆರೋಪಿಗಳು ಪುನಃ ಕರೆ ಮಾಡಿ, “ಆರಂಭದಲ್ಲಿ ಆನ್‌ಲೈನ್‌ನಲ್ಲಿ ನೋಂದಣಿ (Registration) ಮಾಡಿಕೊಳ್ಳಬೇಕು. ನಂತರ ಕಂಪನಿಯ ಫೀಲ್ಡ್ ಆಫೀಸರ್‌ಗಳು ಸ್ಥಳಕ್ಕೆ ಭೇಟಿ ನೀಡಿ ಒಪ್ಪಂದ ಹಾಗೂ ಏರಿಯಾ ಪಿನ್ ಕೋಡ್ ಲಾಕಿಂಗ್ ಮಾಡಿಕೊಡುತ್ತಾರೆ” ಎಂದು ನಂಬಿಸಿದ್ದರು. ಫೀಲ್ಡ್ ಆಫೀಸರ್‌ಗಳೆಂದು ಪರಿಚಯಿಸಿಕೊಂಡ ಎಮ್. ಸಾಯಿಕೃಷ್ಣ, ಎಮ್. ಗುರುಸ್ವಾಮಿ, ಸುರೇಶ್ ಕುಮಾರ್, ರಾಜ್ ಕುಮಾರ್ ಮತ್ತು ಮಹೇಶ್ ಎಂಬುವರು ಡೆಲಿವರಿ ಹಬ್ ಕೊಡಿಸುವುದಾಗಿ ರವಿಚಂದ್ರ ಅವರಿಂದ ಹಂತ ಹಂತವಾಗಿ ಒಟ್ಟು ₹4,20,000 ಹಣವನ್ನು ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಿಕೊಂಡು ಯಾವುದೇ ಫ್ರಾಂಚೈಸಿ ನೀಡದೆ ವಂಚಿಸಿದ್ದಾರೆ.
ಈ ಕುರಿತು ಸಂತ್ರಸ್ತ ರವಿಚಂದ್ರ ನೀಡಿದ ದೂರಿನಂತೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 133/2026 ರಲ್ಲಿ ಭಾರತೀಯ ನ್ಯಾಯ ಸಂಹಿತೆ (BNS) ಯ ವಿವಿಧ ಕಲಂಗಳಡಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.








