ಬಂಟ್ವಾಳ : ಬೆಳಗ್ಗೆ 5 ಗಂಟೆಗೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕು ಕೇಂದ್ರ ಬಿ.ಸಿ. ರೋಡ್ಗೆ ಬಿಳಿ ಬಣ್ಣದ ಐಷಾರಾಮಿ ಫಾರ್ಚೂನರ್ ಕಾರೊಂದು ಬಂದು ನಿಲ್ಲುತ್ತದೆ. ಕಾರಿನಿಂದಿಳಿಯುವ ವ್ಯಕ್ತಿ ಹೆಮ್ಮೆಯಿಂದ ಪೊರಕೆ ಹಿಡಿದು ಇಡೀ ಬಿ.ಸಿ. ರೋಡ್ ಪೇಟೆಯ ಸ್ವಚ್ಛತಾ ಕಾರ್ಯದಲ್ಲಿ ನಿರತರಾಗುತ್ತಾರೆ. ಇವರೇ ಬಂಟ್ವಾಳ ಪುರಸಭೆಯ ಹಿರಿಯ ಪೌರಕಾರ್ಮಿಕ, ಕಾಯಕಯೋಗಿ ಸೇಸಪ್ಪ ನಾವೂರು (ಸೇಸಪ್ಪಣ್ಣ).
ಕಲಿತದ್ದು 3ನೇ ತರಗತಿ, 1996ರಲ್ಲಿ ದಿನಕ್ಕೆ 50 ರೂಪಾಯಿ ದಿನಗೂಲಿಗೆ ಸೇರಿದ್ದ ಸೇಸಪ್ಪ ಅವರಿಗೆ ಕಾರುಗಳೆಂದರೆ ಅಪಾರ ಪ್ರೀತಿ. ಹಿಂದೆ ಸೈಕಲ್ನಲ್ಲಿ ತಿರುಗಾಡುತ್ತಿದ್ದ ದಿನಗಳಲ್ಲೇ ಕಾರು ಕೊಳ್ಳುವ ಕನಸು ಕಂಡಿದ್ದ ಇವರು, ಸಣ್ಣ ಸಣ್ಣ ಉಳಿತಾಯ ಮಾಡಿ ಮೊದಲು ಮಾರುತಿ 800, ಬಳಿಕ ಓಮ್ನಿ, ರಿಟ್ಜ್, ಆಲ್ಟೊ ಹಾಗೂ ಸ್ಕಾರ್ಪಿಯೋ ಕಾರುಗಳನ್ನು ಖರೀದಿಸಿದ್ದರು. ಇತ್ತೀಚೆಗೆ ಆಲ್ಟೊ ಮತ್ತು ಸ್ಕಾರ್ಪಿಯೋ ಮಾರಿ, ಕೊಂಚ ಸಾಲ ಮಾಡಿ ತಮ್ಮ ಕನಸಿನ ಫಾರ್ಚೂನರ್ ಕಾರನ್ನು ಖರೀದಿಸಿ ಎಲ್ಲರ ಗಮನ ಸೆಳೆದಿದ್ದಾರೆ.
ಕಳೆದ 30 ವರ್ಷಗಳಿಂದ ಪೌರಕಾರ್ಮಿಕರಾಗಿ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ಸೇಸಪ್ಪಣ್ಣ, ಕಚೇರಿಯ ತ್ಯಾಜ್ಯ ವಿಲೇವಾರಿ ವಾಹನ ಚಾಲಕರಾಗಿಯೂ ಕೆಲಸ ಮಾಡಿದ್ದಾರೆ. ಸ್ವಚ್ಛತಾ ಕಾಯಕದ ಜೊತೆಗೆ ಕೃಷಿ, ಹೈನುಗಾರಿಕೆ, ಕೂಲಿ ಕೆಲಸ ಹಾಗೂ ಪರಂಪರಾಗತವಾಗಿ ಬಂದ ದೈವನರ್ತನ ಸೇವೆಯನ್ನೂ ಅಚ್ಚುಕಟ್ಟಾಗಿ ನಡೆಸಿಕೊಂಡು ಬರುತ್ತಿದ್ದಾರೆ.
2005ರಲ್ಲಿ ಅಂದಿನ ಪೋಲಿಸ್ ಎಸ್ಐ ಬೆಳ್ಳಿಯಪ್ಪ ಅವರ ಸಲಹೆಯಂತೆ ಕುಡಿತವನ್ನು ಸಂಪೂರ್ಣವಾಗಿ ತ್ಯಜಿಸಿದ ಸೇಸಪ್ಪಣ್ಣ, ಬದುಕಿನಲ್ಲಿ ಕಠಿಣ ಶ್ರಮಕ್ಕೆ ಒತ್ತು ನೀಡಿದರು. “ಯಾವ ಕೆಲಸವೂ ಸಣ್ಣದಲ್ಲ, ಯಾವುದೂ ದೊಡ್ಡದಲ್ಲ. ನನ್ನ ವೃತ್ತಿಗೆ ಬದ್ಧತೆಯಿಂದ ಕೆಲಸ ಮಾಡುತ್ತಿದ್ದೇನೆ” ಎಂದು ಹೆಮ್ಮೆಯಿಂದ ಹೇಳುವ ಸೇಸಪ್ಪಣ್ಣ, ಕೋಟಿ ಹಣ ಬಂದರೂ ಅಹಂಕಾರ ತೋರದೆ ಸ್ಥಿತಪ್ರಜ್ಞೆಯಿಂದ ಕಾಯಕ ಗೌರವ ಎತ್ತಿಹಿಡಿದ ಮಾದರಿ ವ್ಯಕ್ತಿಯಾಗಿದ್ದಾರೆ.








