ಹರಿಯಾಣ : ಹರಿಯಾಣದ ಕುರುಕ್ಷೇತ್ರದಲ್ಲಿ ಬೆಚ್ಚಿಬೀಳಿಸುವಂತಹ ಕ್ರೂರ ಕೊಲೆ ಪ್ರಕರಣವೊಂದು ಬೆಳಕಿಗೆ ಬಂದಿದೆ. ಉತ್ತರ ಪ್ರದೇಶ ಮೂಲದ ರಾಜೇಶ್ (40) ಎಂಬವರನ್ನು ಆತನ ಪತ್ನಿ ವಿಮಲಾ ಎಂಬಾಕೆ ಅತ್ಯಂತ ಕ್ರೂರವಾಗಿ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾಳೆ.
ಕುರುಕ್ಷೇತ್ರದಲ್ಲಿ ರಿಂಕು ಎಂಬುವವರ ಮನೆಯ ಮೇಲಿನ ಮಹಡಿಯಲ್ಲಿ ದಂಪತಿ ಬಾಡಿಗೆಗೆ ವಾಸಿಸುತ್ತಿದ್ದರು. ಶುಕ್ರವಾರ ಸಂಜೆ ಕೋಣೆಯಿಂದ ಜೋರಾಗಿ ಕಿರುಚಾಡುವ ಶಬ್ದ ಕೇಳಿ ಮನೆ ಮಾಲೀಕ ರಿಂಕು ಮೇಲಕ್ಕೆ ಹೋಗಿ ನೋಡಿದಾಗ ಭೀಕರ ದೃಶ್ಯ ಕಣ್ಣಿಗೆ ಬಿದ್ದಿದೆ. ರಾಜೇಶ್ ರಕ್ತದ ಮಡುವಿನಲ್ಲಿ ಬಿದ್ದಿದ್ದು, ಪತ್ನಿ ವಿಮಲಾ ಆತನ ಕರುಳನ್ನು ಹೊರತೆಗೆದು ಚೀಲವೊಂದಕ್ಕೆ ತುಂಬುತ್ತಿದ್ದಳು! ಮನೆ ಮಾಲೀಕನನ್ನು ಕಂಡ ತಕ್ಷಣ ಗಾಬರಿಗೊಂಡ ಆಕೆ ಕೋಣೆಯಿಂದ ಓಡಿ ಟೆರೇಸ್‌ನಿಂದ ಕೆಳಗೆ ಜಿಗಿದಿದ್ದಾಳೆ.
ರಾಜೇಶ್ ದೇಹದ ಮರಣೋತ್ತರ ಪರೀಕ್ಷೆಯಲ್ಲಿ ಆತನ ಹೊಟ್ಟೆಯ ಭಾಗದಲ್ಲಿ ಬರೋಬ್ಬರಿ 35 ಸೆಂಟಿಮೀಟರ್‌ಗಳಷ್ಟು ಆಳವಾದ ಗಾಯಗಳಿರುವುದು ಪತ್ತೆಯಾಗಿದೆ. ಘಟನಾ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಕೃತ್ಯಕ್ಕೆ ಬಳಸಿದ್ದ ಮೂರು ಚಾಕುಗಳನ್ನು ವಶಪಡಿಸಿಕೊಂಡಿದ್ದಾರೆ. ಟೆರೇಸ್‌ನಿಂದ ಜಿಗಿದು ಗಾಯಗೊಂಡಿರುವ ಆರೋಪಿ ವಿಮಲಾಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ವಿಮಲಾ ಭೂತೋಚ್ಚಾಟನೆ ಅಥವಾ ಮಾಟ-ಮಂತ್ರದಂತಹ ಚಟುವಟಿಕೆಗಳಲ್ಲಿ ತೊಡಗಿದ್ದಳು, ಹೀಗಾಗಿ ದಂಪತಿ ನಡುವೆ ಆಗಾಗ್ಗೆ ಜಗಳ ನಡೆಯುತ್ತಿತ್ತು ಎಂದು ಮನೆ ಮಾಲೀಕ ಆರೋಪಿಸಿದ್ದಾರೆ. ವಿಮಲಾ ಮತ್ತು ರಾಜೇಶ್ ಮದುವೆಯಾಗಿ ಹಲವು ವರ್ಷಗಳಾಗಿದ್ದರೂ ಮಕ್ಕಳಿರಲಿಲ್ಲ ಎನ್ನಲಾಗಿದೆ. ಕೊಲೆಯ ಹಿಂದಿನ ನಿಜವಾದ ಕಾರಣ ಹಾಗೂ ವೈವಾಹಿಕ ಕಲಹದ ಬಗ್ಗೆ ಪೊಲೀಸರು ತೀವ್ರ ತನಿಖೆ ನಡೆಸುತ್ತಿದ್ದಾರೆ.








