ಪುತ್ತೂರು : ದರ್ಬೆಯಲ್ಲಿ ಝೆರಾಕ್ಸ್ ಅಂಗಡಿ ಮಾಲಕಿ ಮೇಲೆ ನಡೆದ ಹಲ್ಲೆ ಹಾಗೂ ಈ ಪ್ರಕರಣದಲ್ಲಿ ಪೊಲೀಸ್ ಇಲಾಖೆಯ ವೈಫಲ್ಯವನ್ನು ಖಂಡಿಸಿ ಇಂದು ಪುತ್ತೂರು ನಗರದಲ್ಲಿ ಸ್ವಯಂಪ್ರೇರಿತ ಬಂದ್‌ಗೆ ಕರೆ ನೀಡಲಾಗಿದೆ.
ಹಿಂದೂ ಜಾಗರಣ ವೇದಿಕೆ ನೀಡಿದ ಈ ಸ್ವಯಂಪ್ರೇರಿತ ಬಂದ್ ಕರೆಗೆ ಬಿಜೆಪಿ, ವಿವಿಧ ಹಿಂದೂಪರ ಸಂಘಟನೆಗಳು ಹಾಗೂ ಬಿಎಂಎಸ್ ಆಟೋ ಯೂನಿಯನ್ ಬೆಂಬಲ ವ್ಯಕ್ತಪಡಿಸಿವೆ. ಪುತ್ತೂರು ನಗರದ ಹಲವು ವರ್ತಕರು ಅಂಗಡಿಗಳನ್ನು ಮುಚ್ಚಿ ಬೆಂಬಲ ಸೂಚಿಸಿದ್ದು, ಬೆರಳೆಣಿಕೆಯಷ್ಟೇ ಅಂಗಡಿಗಳು ತೆರೆದಿವೆ. ರಸ್ತೆಯಲ್ಲಿ ಆಟೋ ರಿಕ್ಷಾಗಳ ಸಂಚಾರ ಗಣನೀಯವಾಗಿ ಕಡಿಮೆಯಾಗಿದೆ. ಇತ್ತ ಈದ್ ಮಿಲಾದ್ ಹಬ್ಬದ ಹಿನ್ನೆಲೆಯಲ್ಲಿ ಮುಸ್ಲಿಂ ಮಾಲಕತ್ವದ ಹೆಚ್ಚಿನ ಅಂಗಡಿ-ಮುಂಗಟ್ಟುಗಳೂ ಸಹ ಬಂದ್ ಆಗಿವೆ.
ಬಂದ್ ಹಾಗೂ ಈದ್ ಮಿಲಾದ್ ಒಂದೇ ದಿನ ಬಂದಿರುವುದರಿಂದ ನಗರದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಮತ್ತು ಪರಿಸ್ಥಿತಿಯನ್ನು ನಿಯಂತ್ರಣದಲ್ಲಿಡಲು ಭಾರಿ ಭದ್ರತೆಯನ್ನು ಕೈಗೊಳ್ಳಲಾಗಿದೆ.
ಪೊಲೀಸ್ ಅಧಿಕಾರಿಗಳು: 1 ಹೆಚ್ಚುವರಿ ಎಸ್‌ಪಿ (Addl SP), 1 ಡಿವೈಎಸ್‌ಪಿ (DySP), 8 ಪಿಎಸ್‌ಐ (PSI), 10 ಎಎಸ್‌ಐ (ASI) ಹಾಗೂ 50 ಸಿಬ್ಬಂದಿ. ಹೆಚ್ಚುವರಿ ಪಡೆಗಳು: 5 ಕೆಎಸ್‌ಆರ್‌ಪಿ (KSRP) ತುಕಡಿ, 3 ಡಿಎಆರ್ (DAR) ತುಕಡಿ ಮತ್ತು 1 ಸ್ಪೆಷಲ್ ಆಕ್ಷನ್ ಫೋರ್ಸ್ (SAF) ತುಕಡಿಯನ್ನು ಸುರಕ್ಷತೆಗಾಗಿ ನಿಯೋಜಿಸಲಾಗಿದೆ.








