ಚಾಮರಾಜನಗರ: ಹನೂರು ಕಾಡಿನಲ್ಲಿ ಮೂವರು ಬೇಟೆಗಾರರ ಎನ್‌ಕೌಂಟರ್ ಪ್ರಕರಣದ ನಂತರ ಮರಿ ವೀರಪ್ಪನ್ ಅಲಿಯಾಸ್ ಗೋವಿಂದನ ಕರಾಳ ಮುಖ ಬಯಲಾಗುತ್ತಿದೆ. ವೀರಪ್ಪನ್‌ನ ಕಟ್ಟಾ ಅಭಿಮಾನಿಯಾಗಿರುವ ಈತ ಸಾಮಾಜಿಕ ಜಾಲತಾಣಗಳಲ್ಲಿ ತನ್ನನ್ನು ತಾನು ವೀರಪ್ಪನ್ ರೀತಿ ಬಿಂಬಿಸಿಕೊಳ್ಳುತ್ತಿದ್ದು, ಎನ್‌ಕೌಂಟರ್ ನಂತರ ನಡೆದ ಪ್ರತಿಭಟನೆಗಳ ಸಂದರ್ಭದಲ್ಲಿ, ಗೋವಿಂದ ಕುಡಿದು ಬಂದು ಅರಣ್ಯ ಕಚೇರಿಗೆ ನುಗ್ಗುವಂತೆ ಜನರನ್ನು ಪ್ರಚೋದಿಸಿದ್ದ ವಿಡಿಯೋ ಕೂಡ ವೈರಲ್ ಆಗಿತ್ತು. ಈತನ ವಿರುದ್ಧ ಈಗಾಗಲೇ ಒಂಬತ್ತು ಪ್ರಕರಣಗಳಿದ್ದು, ಹುಲಿ ಬೇಟೆ, ಜಿಂಕೆ ಮಾಂಸ ಸಾಗಾಣಿಕೆ ಸೇರಿದಂತೆ ಹಲವು ಆರೋಪಗಳಿವೆ. ಇಷ್ಟಲ್ಲದೆ, ಮಹಿಳೆಯೊಬ್ಬರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಬಟ್ಟೆ ಹರಿದು ಥಳಿಸಿದ್ದಾನೆ ಎಂಬ ದೂರು ರಾಮಾಪುರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು, ಎಫ್‌ಐಆರ್ ಕೂಡ ಆಗಿದೆ. ಹೀಗಿದ್ದರೂ ಈತನನ್ನು ಇದುವರೆಗೂ ಬಂಧಿಸದ ಪೊಲೀಸರ ನಡೆ ಬಗ್ಗೆಯೇ ಈಗ ಅನುಮಾನಗಳು ವ್ಯಕ್ತವಾಗಿವೆ.








