ಪುತ್ತೂರು: ಹೆದ್ದಾರಿ ಬದಿ ನಿಲ್ಲಿಸಿದ್ದ ವಾಹನಗಳ ಡಿಸೆಲ್ ಟ್ಯಾಂಕ್ ನಿಂದ ಡಿಸೇಲ್ ಕಳ್ಳತನ ಮಾಡುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಉಪ್ಪಿನಂಗಡಿ ಪೊಲೀಸರು ಬಂಧಿಸಿದ್ದಾರೆ.
ಮಂಡ್ಯ ಮದ್ದೂರು ನಿವಾಸಿಗಳಾದ ಜೈಮುತ್ತಾ (23) ಹಾಗು ಮುತ್ತು (28) ಬಂಧತ ಆರೋಪಿಗಳು.
ಸೆ.3 ರಂದು ರಾತ್ರಿ ರೌಂಡ್ಸ್ ಕರ್ತವ್ಯದಲ್ಲಿದ್ದ ಉಪ್ಪಿನಂಗಡಿ ಪೊಲೀಸ್ ಠಾಣಾ ಸಿಬ್ಬಂದಿ ಬೈಕ್ ನಲ್ಲಿ ಕಡಬ ಕೌಕ್ರಾಡಿ ಗ್ರಾಮದ ಅಲಂಪಾಡಿ ಕ್ರಾಸ್ ಎಂಬಲ್ಲಿ ತೆರಳಿದ್ದಾರೆ. ಈ ವೇಳೆ ಮಂಗಳೂರು-ಬೆಂಗಳೂರು ಹೆದ್ದಾರಿ ಬದಿ ನಿಲ್ಲಿಸಿದ್ದ ಟ್ಯಾಂಕರ್ ಬಳಿ ಒಂದು ಬೊಲೆರೋ ಪಿಕ್ ಅಪ್ ವಾಹನ ನಿಂತಿದ್ದು, ಪಕ್ಕದಲ್ಲಿ 3 ಜನ ಅನುಮಾನಾಸ್ಪದವಾಗಿ ನಿಂತಿರುವುದು ಕಂಡುಬಂದಿದೆ.
ಪೊಲೀಸರು ಬರುತ್ತಿರುವುದನ್ನು ಕಂಡ ಅವರುಗಳು ಪರಾರಿಯಾಗಲು ಯತ್ನಿಸಿದ್ದಾರೆ. ಈ ವೇಳೆ ಇಬ್ಬರನ್ನು ಹಿಡಿದು ವಿಚಾರಿಸಿದಾಗ ಹೆದ್ದಾರಿ ಬದಿ ನಿಲ್ಲಿಸಿದ್ದ ವಾಹನಗಳ ಡಿಸೆಲ್ ಟ್ಯಾಂಕ್ ನಿಂದ ಡಿಸೇಲ್ ಕಳ್ಳತನ ಮಾಡುತ್ತಿರುವುದಾಗಿ ತಪ್ಪೊಪ್ಪಿಕೊಂಡಿದ್ದಾರೆ.
ಪೊಲೀಸರು ಕ್ಯಾನ್ ನಲ್ಲಿ ತುಂಬಿಸಲಾಗಿದ್ದ ಸುಮಾರು 20 ಲೀಟರ್ ಡಿಸೆಲ್, ಖಾಲಿ ಕ್ಯಾನ್ ಗಳು, ಡಿಸೆಲ್ ಕಳವು ಮಾಡಲು ಉಪಯೋಗಿಸದ ಒಂದು ರಬ್ಬರ್ ಪೈಪು ಹಾಗೂ ಇತರೆ ಸೊತ್ತುಗಳನ್ನು ಕೃತ್ಯಕ್ಕೆ ಬಳಸಿದ ಪಿಕಪ್ ವಾಹನದೊಂದಿಗೆ ಸ್ವಾಧೀನಪಡಿಸಿಕೊಂಡಿದ್ದಾರೆ.
ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಅ.ಕ್ರ: 118/2026, ಕಲಂ: ಕಲಂ 35 (1)(ಡಿ) ಬಿ.ಎನ್. ಎಸ್. ಎಸ್. 2023 ಮತ್ತು ಕಲಂ 303 (2) ಬಿ.ಎನ್. ಎಸ್. 2023 ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.








