ಬೆಳ್ತಂಗಡಿ : ಲಾರಿ ಹಾಗೂ ಬೈಕ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಬೈಕ್ ಸವಾರ ತೀವ್ರವಾಗಿ ಗಾಯಗೊಂಡು, ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಮೃತಪಟ್ಟ ಘಟನೆ ಸೆಪ್ಟೆಂಬರ್ 3ರಂದು ರಾತ್ರಿ ಚಾರ್ಮಾಡಿ ಸಮೀಪದ ನಡೆದಿದೆ.
ಚಾರ್ಮಾಡಿ ಗ್ರಾಮದ ಮುಗುಳಿದಡ್ಡ ನಿವಾಸಿ ದಯಾನಂದ ಗೌಡ (45) ಮೃತಪಟ್ಟ ದುರ್ದೈವಿ. ಅವಿವಾಹಿತರಾಗಿದ್ದ ಇವರು ಉಜಿರೆಯ ಗ್ಯಾರೇಜ್‌ವೊಂದರಲ್ಲಿ ಮೆಕ್ಯಾನಿಕ್ ಆಗಿ ಕೆಲಸ ನಿರ್ವಹಿಸುತ್ತಿದ್ದರು.
ದಯಾನಂದ ಗೌಡ ಅವರು ರಾತ್ರಿ ಗ್ಯಾರೇಜ್ ಕೆಲಸ ಮುಗಿಸಿಕೊಂಡು ತಮ್ಮ ಬೈಕ್‌ನಲ್ಲಿ ಮನೆಗೆ ಹಿಂದಿರುಗುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ. ಚಿಬಿದ್ರೆ ಸಮೀಪ ತೆರಳುತ್ತಿದ್ದಾಗ, ಎದುರಿನಿಂದ ತರಕಾರಿ ತುಂಬಿಕೊಂಡು ಬರುತ್ತಿದ್ದ ಲಾರಿಗೆ ಇವರ ಬೈಕ್ ನೇರವಾಗಿ ಢಿಕ್ಕಿ ಹೊಡೆದಿದೆ.
ಢಿಕ್ಕಿಯ ಭರಭಸಕ್ಕೆ ರಸ್ತೆಗೆ ಎಸೆಯಲ್ಪಟ್ಟ ದಯಾನಂದ ಗೌಡ ಅವರ ತಲೆ ಹಾಗೂ ದೇಹಕ್ಕೆ ಗಂಭೀರ ಗಾಯಗಳಾಗಿದ್ದವು. ತಕ್ಷಣವೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಮಾರ್ಗಮಧ್ಯೆಯೇ ಅವರು ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ. ಮೃತರು ತಾಯಿ ಹಾಗೂ ಸಹೋದರನನ್ನು ಅಗಲಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಬೆಳ್ತಂಗಡಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.








