ಹಾವೇರಿ: ಮುಂದಿನ ಜನ್ಮ ಅಂತಿದ್ರೆ ನಾನು ನಿನ್ನವನಾಗಿ ಹುಟ್ಟಿ ಬರುವೆ ಎಂದು ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಹಾಕಿ ಯುವಕ ಸಾವಿಗೆ ಶರಣಾಗಿರೋ ಘಟನೆ ಹಾವೇರಿ ನಗರದ ದೇವದಾರ್ ಏರಿಯಾದ ಮನೆಯಲ್ಲಿ ನಡೆದಿದೆ. ಪ್ರೀತಿಸಿ ಮದುವೆಯಾಗಿದ್ದ ಜೋಡಿಗೆ ಹುಡುಗಿ ಪೋಷಕರೇ ವಿಲನ್ ಆಗಿದ್ದು, ಗುಟ್ಟಾಗಿ ಹಸೆಮಣೆ ಏರಿದವನು ಕೆಲ ದಿನಗಳಲ್ಲೇ ನೇಣಿಗೆ ಶರಣಾಗಿದ್ದಾನೆ.
ಅಷ್ಟಕ್ಕೂ ಆಗಿದ್ದೇನು?
ಮನನೊಂದು ನೇಣಿಗೆ ಶರಣಾದ ಯುವಕ
ಯುವತಿಯೊಬ್ನಳನ್ನು ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸಿದ್ದ ಹಾವೇರಿಯ ಮಂಜುನಾಥ್ ಅಗಡಿ (24) ಎಂಬ ಯುವಕ ದುಡುಕು ನಿರ್ಧಾರಕ್ಕೆ ಜೀವ ಕಳೆದುಕೊಂಡಿದ್ದಾನೆ. ಎರಡು ವರ್ಷಗಳಿಂದ ಯುವತಿಯೊಬ್ಬಳ ಜೊತೆ ಪ್ರೀತಿಯಲ್ಲಿ ಬಿದ್ದಿದ್ದ ಮಂಜುನಾಥ್, ಇತ್ತೀಚೆಗಷ್ಟೇ ಯುವತಿಯನ್ನ ಸ್ಥಳೀಯ ದೇವಸ್ಥಾನವೊಂದರಲ್ಲಿ ಮದುವೆಯಾಗಿದ್ದ.
ಗುಟ್ಟಾಗಿ ಮದುವೆಯಾಗಿದ್ದ ಜೋಡಿ
ಆದ್ರೆ ಈ ಮದುವೆ ಯುವತಿ ಪೋಷಕರಿಗೆ ಇಷ್ಟ ಇರಲಿಲ್ಲ. ಓಡಿ ಹೋಗಿ ಲವ್ ಮ್ಯಾರೇಜ್ ಆಗಿದ್ದವರಿಗೆ ಪೋಷಕರು ಶಾಕ್ ಕೊಟ್ಟಿದ್ದು, ಯುವತಿ ಪೋಷಕರು ಹಾವೇರಿ ಮಹಿಳಾ ಠಾಣೆಯಲ್ಲಿ ಮಿಸ್ಸಿಂಗ್ ಕೇಸ್ ದಾಖಲಿಸಿದ್ದಾರೆ. ಕೆಲ ದಿನಗಳ ಹಿಂದೆ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ವಿಚಾರಣೆ ನಡೆದಿತ್ತು. ಬಳಿಕ ಬಲವಂತವಾಗಿ ಪೋಷಕರು ಯುವತಿಯನ್ನು ಮನೆಗೆ ಕರೆದೊಯ್ದಿದ್ದರಂತೆ..
ಮುಂದಿನ ಜನ್ಮ ಅಂತಿದ್ರೆ ನಾನು ನಿನ್ನವನಾಗಿ ಹುಟ್ಟಿ ಬರುವೆ
ಇದರಿಂದ ಮನನೊಂದು ಯುವಕ ಮುಂದಿನ ಜನ್ಮ ಅಂತಿದ್ರೆ ನಾನು ನಿನ್ನವನಾಗಿ ಹುಟ್ಟಿ ಬರುವೆ ಎಂದು ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಹಾಕಿ ತಮ್ಮ ಮನೆಯಲ್ಲೇ ನೇಣಿಗೆ ಶರಣಾಗಿದ್ದಾನೆ ಎಂದು ತಿಳಿದು ಬಂದಿದೆ.







