ಶಿವಮೊಗ್ಗ : ಸಹೋದರರ ನಡುವೆ ಜಮೀನು ವಿಚಾರಕ್ಕೆ ನಡೆದ ಗಲಾಟೆಯಲ್ಲಿ ತನ್ನ ಚಿಕ್ಕಪ್ಪನಿಗೆ ಯುವಕನೋರ್ವ ಚಾಕು ಇರಿದ ಘಟನೆ ಶಿವಮೊಗ್ಗ ತಾಲೂಕಿನ ಪುರದಾಳು ಗ್ರಾಮದಲ್ಲಿ ರವಿವಾರ ನಡೆದಿದೆ.
ಪುರದಾಳು ಗ್ರಾಮದ ನಿವಾಸಿ ಶ್ರೀನಿವಾಸ್(52) ಚಾಕು ಇರಿತಕ್ಕೆ ಒಳಗಾದ ವ್ಯಕ್ತಿ.ರಾಜಪ್ಪ ಪುತ್ರ ಮಂಜುನಾಥ್ ಚಾಕು ಇರಿದ ಆರೋಪಿ ಎಂದು ಗುರುತಿಸಲಾಗಿದೆ.ಗ್ರಾಮದ ರಾಜಪ್ಪ ಹಾಗೂ ಶ್ರೀನಿವಾಸ್ ಎಂಬ ಸಹೋದರರ ನಡುವೆ ಜಮೀನಿನ ಗಡಿ ಹಾಗೂ ಅಡಿಕೆ ತೋಟಕ್ಕೆ ನೀರು ಹಾಯಿಸುವ ವಿಚಾರಕ್ಕೆ ಗಲಾಟೆ ನಡೆದಿದೆ ಎನ್ನಲಾಗಿದೆ.
ಶ್ರೀನಿವಾಸ್ ಮತ್ತು ಆತನ ಪತ್ನಿ ಅಡಿಕೆ ತೋಟದಲ್ಲಿ ನೀರು ಹಾಯಿಸುವಾಗ ಸಹೋದರ ರಾಜಪ್ಪ ಮತ್ತು ಆತನ ಪತ್ನಿ ಯಾಕೆ ನೀರು ಹಾಯಿಸುತ್ತೀಯಾ ಎಂದು ಪ್ರಶ್ನಿಸಿದ್ದಾರೆ. ಈ ವೇಳೆ ರಾಜಪ್ಪ ಮತ್ತು ಆತನ ಪತ್ನಿ ಶ್ರೀನಿವಾಸ್ ದಂಪತಿಗಳ ಮೇಲೆ ಏಕಾಏಕಿ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಈ ವೇಳೆ ಸ್ಥಳಕ್ಕೆ ಬಂದ ರಾಜಪ್ಪನ ಪುತ್ರ ಕಾರಿನಿಂದ ಇಳಿದು ಚಾಕು ತೆಗೆದುಕೊಂಡು ಚಿಕ್ಕಪ್ಪ ಶ್ರೀನಿವಾಸ್ ಗೆ ಏಕಾಏಕಿ ಹಲವು ಬಾರಿ ಚಾಕು ಇರಿದಿದ್ದಾನೆ ಎನ್ನಲಾಗಿದೆ.
ಶ್ರೀನಿವಾಸ್ ಗೆ ಎದೆ, ಪಕ್ಕೆಲುಬು ಹಾಗೂ ತೊಡೆಯ ಭಾಗದಲ್ಲಿ ಚಾಕು ಇರಿದಿದ್ದಾನೆ. ಈ ವೇಳೆ ಗಲಾಟೆ ಬಿಡಿಸಲು ಹೋದ ಶ್ರೀನಿವಾಸ್ ಪತ್ನಿ ಶಶಿಕಲಾ ಮೇಲೂ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
ಗಾಯಗೊಂಡ ಶ್ರೀನಿವಾಸ್ ಹಾಗೂ ಆತನ ಪತ್ನಿ ಶಶಿಕಲಾನನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಪ್ರಕರಣ ಸಂಬಂಧ ರಾಜಪ್ಪ ಹಾಗೂ ಅವರ ಪುತ್ರ ಮಂಜುನಾಥ್ ನನ್ನು ತುಂಗಾನಗರ ಠಾಣೆ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಘಟನೆ ಕುರಿತು ಮಂಜುನಾಥ್, ರಾಜಪ್ಪ, ಶಾಂತಮ್ಮ ಹಾಗೂ ಅರ್ಪಿತಾ ವಿರುದ್ಧ ತುಂಗಾನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.








