ಮಂಗಳೂರು: ಪುರಭವನದ ಸಮೀಪದ ಫುಟ್ಪಾತ್ನಲ್ಲಿ ಬೀದಿಬದಿ ವ್ಯಾಪಾರ ನಡೆಸುತ್ತಿದ್ದವರ ವಿರುದ್ಧ ಮಂಗಳೂರು ಮಹಾನಗರ ಪಾಲಿಕೆ ರವಿವಾರ ಬೆಳಗ್ಗೆ ತೆರವು ಕಾರ್ಯಾಚರಣೆ ನಡೆಸಿತು. ಕಾರ್ಯಾಚರಣೆಯ ವೇಳೆ ಮಂಗಳೂರು ಮಹಾನಗರ ಪಾಲಿಕೆ ಆಯುಕ್ತ ರವಿಚಂದ್ರ ನಾಯಕ್ ಸ್ಥಳದಲ್ಲೇ ಇದ್ದು ಅಧಿಕಾರಿಗಳಿಗೆ ಅಗತ್ಯ ನಿರ್ದೇಶನ ನೀಡಿದರು.
ಕಾರ್ಯಾಚರಣೆ ಆರಂಭಕ್ಕೂ ಮುನ್ನ ವ್ಯಾಪಾರಿಗಳೊಂದಿಗೆ ಮಾತನಾಡಿದ ಆಯುಕ್ತರು, “ಈ ಸ್ಥಳದಲ್ಲಿ ಕಾನೂನು ಹಾಗೂ ನಿಯಮಗಳ ಪ್ರಕಾರ ವ್ಯಾಪಾರ ನಡೆಸಲು ಅವಕಾಶವಿಲ್ಲ” ಎಂದು ತಿಳಿಸಿ, ತೆರವುಗೊಳಿಸುವಂತೆ ಸೂಚಿಸಿದರು. ಆದರೆ ಹಲವು ವರ್ಷಗಳಿಂದ ಇಲ್ಲೇ ಜೀವನೋಪಾಯ ನಡೆಸುತ್ತಿರುವುದಾಗಿ ಹೇಳಿದ ವ್ಯಾಪಾರಿಗಳು, ತಮ್ಮ ಸಂಕಷ್ಟವನ್ನು ವಿವರಿಸಿ ಬದಲಿ ವ್ಯವಸ್ಥೆ ಕಲ್ಪಿಸುವಂತೆ ಮನವಿ ಮಾಡಿದರು.
“ನಾವು ಕಳೆದ ನಲವತ್ತು ವರ್ಷಗಳಿಂದ ಇಲ್ಲಿ ವ್ಯಾಪಾರ ಮಾಡುತ್ತಿದ್ದೇವೆ. ಪ್ರಾಮಾಣಿಕವಾಗಿ ದುಡಿದು ಜೀವನ ಸಾಗಿಸುತ್ತಿದ್ದೇವೆ. ನಮಗೆ ಪರ್ಯಾಯ ಸ್ಥಳ ಒದಗಿಸಿ,” ಎಂದು ವ್ಯಾಪಾರಿಗಳು ಮನವಿ ಸಲ್ಲಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಆಯುಕ್ತರು, “ಬದಲಿ ವ್ಯವಸ್ಥೆ ಕಲ್ಪಿಸಲು ಸಾಧ್ಯವಿಲ್ಲ” ಎಂದು ಸ್ಪಷ್ಟಪಡಿಸಿದರು.
ಈ ಉತ್ತರಕ್ಕೆ ಅಸಮಾಧಾನ ವ್ಯಕ್ತಪಡಿಸಿದ ವ್ಯಾಪಾರಿಗಳು, “ಹಾಗೆ ಹೇಳಬೇಡಿ ಸಾರ್… ನಮಗೆ ನ್ಯಾಯ ದೊರಕುವಂತೆ ಮಾಡಿ” ಎಂದು ಮತ್ತೊಮ್ಮೆ ಮನವಿ ಮಾಡಿಕೊಂಡರು. ಆದಾಗ್ಯೂ, ನಿಯಮ ಉಲ್ಲಂಘಿಸಿ ಯಾರಾದರೂ ವ್ಯಾಪಾರ ಮುಂದುವರಿಸಿದರೆ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ರವಿಚಂದ್ರ ನಾಯಕ್ ಎಚ್ಚರಿಕೆ ನೀಡಿದರು.
ಇದೇ ವೇಳೆ ಕಾರ್ಯಾಚರಣೆಯನ್ನು ಪ್ರಶ್ನಿಸಿ ಪ್ರತಿಭಟನೆಗೆ ಮುಂದಾದ ಕೆಲ ಬೀದಿಬದಿ ವ್ಯಾಪಾರಿಗಳನ್ನು ಪೊಲೀಸರು ವಶಕ್ಕೆ ಪಡೆದು ವಾಹನಗಳಲ್ಲಿ ಕರೆದೊಯ್ದರು. ಬಳಿಕ ಮಹಾನಗರ ಪಾಲಿಕೆ ಸಿಬ್ಬಂದಿ ಫುಟ್ಪಾತ್ನಲ್ಲಿದ್ದ ಅಂಗಡಿಗಳನ್ನು ತೆರವುಗೊಳಿಸುವ ಕಾರ್ಯವನ್ನು ಮುಂದುವರಿಸಿದರು.








