ಬೆಂಗಳೂರು: ಕೆಪಿಎಸ್ಸಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ಅವರನ್ನು ಅಮಾನತು ಮಾಡಿ ರಾಜ್ಯಪಾಲರು ಆದೇಶ ಹೊರಡಿಸಿದ್ದಾರೆ.
ಅಮಾನತು ಮಾಡಿ ರಾಜ್ಯಪಾಲ ಥಾವರ್ಚಂದ್ ಗೆಹ್ಲೋಟ್ ಅವರು, ಶಿವಶಂಕರಪ್ಪ ವಿರುದ್ಧ ಮಾಡಲಾದ ಆರೋಪಗಳ ಬಗ್ಗೆ ಅಗತ್ಯ ತನಿಖೆಗಾಗಿ ಭಾರತದ ಸಂವಿಧಾನದ 317(1)ನೇ ವಿಧಿಯ ಅಡಿಯಲ್ಲಿ ಸುಪ್ರೀಂ ಕೋರ್ಟ್ಗೆ ಉಲ್ಲೇಖಿಸುವಂತೆ ರಾಷ್ಟ್ರಪತಿಗಳಿಗೆ ಶಿಫಾರಸ್ಸು ಮಾಡಿದ್ದಾರೆ. ಜೊತೆಗೆ ತನಿಖೆ ಕುರಿತು ರಾಷ್ಟ್ರಪತಿಗಳಿಂದ ಮುಂದಿನ ಆದೇಶ ಬರುವವರೆಗೆ ಆಯೋಗದ ಅಧ್ಯಕ್ಷ ಹುದ್ದೆಯಿಂದ ತಕ್ಷಣದಿಂದ ಜಾರಿಗೆ ಬರುವಂತೆ ಶಿವಶಂಕರಪ್ಪ ಅವರನ್ನು ಅಮಾನತು ಮಾಡಿದ್ದಾರೆ. ಅಲ್ಲಿಯವರೆಗೆ ಆಯೋಗದ ಹಿರಿಯ ಸದಸ್ಯರು ಕರ್ನಾಟಕ ಲೋಕ ಸೇವಾ ಆಯೋಗದ ಹಂಗಾಮಿ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುವಂತೆ ಆದೇಶಿಸಿದ್ದಾರೆ.
ಕರ್ನಾಟಕ ಲೋಕ ಸೇವಾ ಆಯೋಗದ ಅಧ್ಯಕ್ಷರಾದ ಶಿವಶಂಕರಪ್ಪ ಎಸ್. ಸಾಹುಕಾರ ಇವರ ವಿರುದ್ಧ ಸ್ವಜನ ಪಕ್ಷಪಾತ, ಮಾಹಿತಿಯನ್ನು ಬಹಿರಂಗಪಡಿಸದೇ ಇರುವುದು ಇತ್ಯಾದಿ ದೂರುಗಳು ಬಂದಿದ್ದು, ಅವರ ಇಬ್ಬರು ಹೆಣ್ಣುಮಕ್ಕಳನ್ನು ಕಾನೂನುಬಾಹಿರವಾಗಿ, ಅಧಿಕಾರ ದುರುಪಯೋಗಪಡಿಸಿಕೊಂಡು, ಕೈಗಾರಿಕಾ ವಿಸ್ತರಣಾ ಅಧಿಕಾರಿ ಹುದ್ದೆಗಳಿಗೆ ಆಯ್ಕೆ ಮಾಡಲು ಅನುಕೂಲ ಮಾಡಿಕೊಟ್ಟಿದ್ದಕ್ಕಾಗಿ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಲಾಗಿದೆ. ಅವರ ನೇರ ಅವಲಂಬಿತರು ಕೆಪಿಎಸ್ಸಿ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದಾಗ ಅಧ್ಯಕ್ಷರು ತಾವು ಈ ನೇಮಕಾತಿ ಪ್ರಕ್ರಿಯೆಯಿಂದ ದೂರವಿರಲು ಅಥವಾ ಹಿತಾಸಕ್ತಿ ಸಂಘರ್ಷವನ್ನು ಔಪಚಾರಿಕವಾಗಿ ಘೋಷಿಸಲು ವಿಫಲರಾಗಿದ್ದಾರೆ ಎಂಬುದು ಸ್ಪಷ್ಟವಾಗಿ ಕಂಡುಬಂದಿದೆ.








