ನವದೆಹಲಿ: ಭಾರತದ ಮಹತ್ವಾಕಾಂಕ್ಷೆಯ ಗಗನಯಾನ ಮಾನವಸಹಿತ ಬಾಹ್ಯಾಕಾಶ ಯೋಜನೆ ಸೇರಿದಂತೆ ಹಲವು ಬಾಹ್ಯಾಕಾಶ ಕಾರ್ಯಕ್ರಮಗಳ ನಡುವೆಯೇ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಪ್ರತಿಭಾ ಪಲಾಯನದ ಸವಾಲನ್ನು ಎದುರಿಸುತ್ತಿದೆ. ಕಳೆದ ಕೆಲವು ತಿಂಗಳುಗಳಲ್ಲಿ 100ಕ್ಕೂ ಹೆಚ್ಚು ಹಿರಿಯ ವಿಜ್ಞಾನಿಗಳು ರಾಜೀನಾಮೆ ನೀಡಿರುವ ಹಿನ್ನೆಲೆಯಲ್ಲಿ, ಕೇಂದ್ರ ಸರ್ಕಾರ ರಾಜೀನಾಮೆ ಹಾಗೂ ಸ್ವಯಂಪ್ರೇರಿತ ನಿವೃತ್ತಿ ಪ್ರಕ್ರಿಯೆಯನ್ನು ಮತ್ತಷ್ಟು ಕಠಿಣಗೊಳಿಸಿದೆ.
ಕೇಂದ್ರ ಬಾಹ್ಯಾಕಾಶ ಇಲಾಖೆ ಜುಲೈ 14ರಂದು ಹೊರಡಿಸಿರುವ ಹೊಸ ಆಂತರಿಕ ಮಾರ್ಗಸೂಚಿಗಳ ಪ್ರಕಾರ, ಪ್ರಮುಖ ವೈಜ್ಞಾನಿಕ ಮತ್ತು ತಾಂತ್ರಿಕ ಸಿಬ್ಬಂದಿಯ ರಾಜೀನಾಮೆ ಅರ್ಜಿಗಳನ್ನು ಇನ್ನು ಮುಂದೆ ಸ್ಥಳೀಯ ಮಟ್ಟದಲ್ಲಿ ಅಂಗೀಕರಿಸಲು ಅವಕಾಶ ಇರುವುದಿಲ್ಲ. ಇದುವರೆಗೆ ಇಸ್ರೋದ ವಿವಿಧ ಕೇಂದ್ರಗಳ ನಿರ್ದೇಶಕರು ತಮ್ಮ ವ್ಯಾಪ್ತಿಯ ವಿಜ್ಞಾನಿಗಳ ರಾಜೀನಾಮೆ ಅಥವಾ ವಿಆರ್ಎಸ್ ಅರ್ಜಿಗಳನ್ನು ಪರಿಶೀಲಿಸಿ ಅನುಮೋದಿಸುವ ಅಧಿಕಾರ ಹೊಂದಿದ್ದರು. ಹೊಸ ನಿಯಮದಂತೆ ಈ ಅಧಿಕಾರವನ್ನು ಹಿಂಪಡೆಯಲಾಗಿದ್ದು, ಇಂತಹ ಅರ್ಜಿಗಳನ್ನು ನೇರವಾಗಿ ದೆಹಲಿಯಲ್ಲಿರುವ ಬಾಹ್ಯಾಕಾಶ ಇಲಾಖೆಯ ಉನ್ನತ ಮಟ್ಟದ ಸಮಿತಿ ಪರಿಶೀಲಿಸಿ ಅಂತಿಮ ನಿರ್ಧಾರ ಕೈಗೊಳ್ಳಲಿದೆ.
ವಿಶೇಷವಾಗಿ ಗಗನಯಾನದಂತಹ ರಾಷ್ಟ್ರೀಯ ಮಹತ್ವದ ಯೋಜನೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ‘ಗ್ರೂಪ್-ಎ’ ವೈಜ್ಞಾನಿಕ ಮತ್ತು ತಾಂತ್ರಿಕ ಸಿಬ್ಬಂದಿ ರಾಜೀನಾಮೆ ನೀಡುವ ಪ್ರಕ್ರಿಯೆ ಮೇಲೆ ಹೆಚ್ಚಿನ ನಿಯಂತ್ರಣ ವಿಧಿಸಲಾಗಿದೆ. ಅನುಭವಿ ವಿಜ್ಞಾನಿಗಳು ಏಕಾಏಕಿ ಸಂಸ್ಥೆಯಿಂದ ಹೊರನಡೆದರೆ ಅವರ ಸ್ಥಾನವನ್ನು ತಕ್ಷಣ ಭರ್ತಿ ಮಾಡುವುದು ಸುಲಭವಲ್ಲ. ಪ್ರತಿಯೊಬ್ಬ ವಿಜ್ಞಾನಿಯೂ ನಿರ್ದಿಷ್ಟ ಕ್ಷೇತ್ರದಲ್ಲಿ ಪರಿಣತಿ ಹೊಂದಿರುವುದರಿಂದ, ಅವರ ಅನುಪಸ್ಥಿತಿ ಬಾಹ್ಯಾಕಾಶ ಯೋಜನೆಗಳ ವೇಳಾಪಟ್ಟಿಯ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ ಎಂಬುದು ಸರ್ಕಾರದ ಆತಂಕವಾಗಿದೆ.
ಸರ್ಕಾರ ಅಥವಾ ಇಸ್ರೋ ಈ ಕುರಿತು ಅಧಿಕೃತ ಕಾರಣವನ್ನು ಬಹಿರಂಗಪಡಿಸದಿದ್ದರೂ, ತಜ್ಞರ ಅಭಿಪ್ರಾಯದಂತೆ ಖಾಸಗಿ ಬಾಹ್ಯಾಕಾಶ ಉದ್ಯಮದ ವೇಗದ ಬೆಳವಣಿಗೆಯೇ ಪ್ರಮುಖ ಕಾರಣವಾಗಿದೆ. ಭಾರತದಲ್ಲಿ ಬಾಹ್ಯಾಕಾಶ ಕ್ಷೇತ್ರವನ್ನು ಖಾಸಗಿಯವರಿಗೆ ಮುಕ್ತಗೊಳಿಸಿದ ಬಳಿಕ ಸ್ಕೈರೂಟ್, ಅಗ್ನಿಕುಲ್ ಸೇರಿದಂತೆ ಹಲವು ಸ್ಟಾರ್ಟ್ಅಪ್ಗಳು ಭಾರಿ ಹೂಡಿಕೆಗಳೊಂದಿಗೆ ಬೆಳೆಯುತ್ತಿವೆ. ಇವುಗಳು ಇಸ್ರೋದ ಅನುಭವಿ ವಿಜ್ಞಾನಿಗಳಿಗೆ ಹೆಚ್ಚಿನ ಸಂಬಳ, ಉತ್ತಮ ಹುದ್ದೆಗಳು ಹಾಗೂ ವೃತ್ತಿಜೀವನದ ಹೆಚ್ಚಿನ ಅವಕಾಶಗಳನ್ನು ನೀಡುತ್ತಿರುವುದು ಪ್ರತಿಭಾ ವಲಸೆಗೆ ಕಾರಣವಾಗುತ್ತಿದೆ ಎನ್ನಲಾಗಿದೆ.
ಇದರ ಜೊತೆಗೆ, ಇಸ್ರೋದಲ್ಲಿನ ಪದೋನ್ನತಿ ಪ್ರಕ್ರಿಯೆಯ ನಿಧಾನಗತಿ, ಆಡಳಿತಾತ್ಮಕ ಒತ್ತಡ ಹಾಗೂ ಕಾರ್ಯವೈಖರಿಯ ನಿರ್ಬಂಧಗಳೂ ಕೆಲವು ವಿಜ್ಞಾನಿಗಳು ಸಂಸ್ಥೆ ತೊರೆಯಲು ಕಾರಣವಾಗಿರಬಹುದು ಎಂದು ಮಾಜಿ ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ. ಆರ್ಟಿಐ ಮೂಲಕ ಈ ಹಿಂದೆ ಬಹಿರಂಗಗೊಂಡ ಮಾಹಿತಿಯ ಪ್ರಕಾರ, 2012ರಿಂದ 2017ರ ಅವಧಿಯಲ್ಲಿ 300ಕ್ಕೂ ಹೆಚ್ಚು ವಿಜ್ಞಾನಿಗಳು ಇಸ್ರೋ ತೊರೆದಿದ್ದರು. ಆದರೆ ಈಗಿನ ಪರಿಸ್ಥಿತಿ ಇನ್ನಷ್ಟು ಮಹತ್ವದ್ದಾಗಿದೆ. ಭಾರತ ಗಗನಯಾನ, ಚಂದ್ರಯಾನ, ಮಂಗಳಯಾನ ಸೇರಿದಂತೆ ಹಲವು ಮಹತ್ವಾಕಾಂಕ್ಷೆಯ ಯೋಜನೆಗಳನ್ನು ಕೈಗೊಂಡಿರುವ ಹಿನ್ನೆಲೆಯಲ್ಲಿ ಅನುಭವಿ ವಿಜ್ಞಾನಿಗಳ ಸೇವೆ ಅತ್ಯಂತ ಅಗತ್ಯವಾಗಿದೆ. ಹೀಗಾಗಿ, ಪ್ರತಿಭಾವಂತ ವಿಜ್ಞಾನಿಗಳನ್ನು ಸಂಸ್ಥೆಯಲ್ಲೇ ಉಳಿಸಿಕೊಳ್ಳುವ ಉದ್ದೇಶದಿಂದ ಕೇಂದ್ರ ಸರ್ಕಾರ ಹೊಸ ನಿಯಮಗಳನ್ನು ಜಾರಿಗೆ ತಂದಿದ್ದು, ಈ ಕ್ರಮದಿಂದ ಪ್ರತಿಭಾ ಪಲಾಯನಕ್ಕೆ ಕಡಿವಾಣ ಬೀಳುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ.








