ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಸಮೀಪದ ಕಾಣಿಯೂರು ಬಳಿಯ ಅಡಿಂಜೆ ಗ್ರಾಮದಲ್ಲಿ ಕಾರ್ಯಾಚರಣೆ ನಡೆಸಿದ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸರು, ಬೃಹತ್ ನಕಲಿ ನೋಟು ತಯಾರಿಕಾ ಜಾಲವನ್ನು ಭೇದಿಸಿ ಏಳು ಮಂದಿಯನ್ನು ಬಂಧಿಸಿದ್ದಾರೆ.
ಬಂಧಿತರಿಂದ ₹500 ಮುಖಬೆಲೆಯ ನಕಲಿ ನೋಟುಗಳನ್ನು ತಯಾರಿಸಲು ಬಳಸಲಾಗುತ್ತಿದ್ದ ಪ್ರಿಂಟರ್, ಸ್ಕ್ಯಾನರ್, ವಿಶೇಷ ಮುದ್ರಣ ಸಾಮಗ್ರಿಗಳು, ನಕಲಿ ಆರ್ಬಿಐ (RBI) ಸೆಕ್ಯೂರಿಟಿ ಥ್ರೆಡ್ಗಳು, ಸೀಲ್ಗಳು ಹಾಗೂ ನೋಟು ಮುದ್ರಣಕ್ಕೆ ಬಳಸುವ ವಿಶೇಷ ಕಾಗದದ ಬಂಡಲ್ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಬಂಧಿತರನ್ನು ಪುತ್ತೂರು ನಿವಾಸಿಗಳಾದ ಇಬ್ರಾಹಿಂ ಮತ್ತು ಸಲ್ಮಾನ್, ಬೆಳ್ತಂಗಡಿ ನಿವಾಸಿಗಳಾದ ಸಿರಾಜುದ್ದೀನ್ ಹಾಗೂ ಇರ್ಷಾದ್, ಹಳಿಯಾಳ ಮೂಲದ ಸಂದೀಪ್, ಕೇರಳದ ಕಾಸರಗೋಡು ನಿವಾಸಿಗಳಾದ ಶರೀಫ್ ಮತ್ತು ಮೊಹಮ್ಮದ್ ನವಾಸ್ ಎಂದು ಗುರುತಿಸಲಾಗಿದೆ.
ಪೊಲೀಸರ ಮಾಹಿತಿ ಪ್ರಕಾರ, ಈ ಜಾಲದ ಪ್ರಮುಖ ಸೂತ್ರಧಾರ ಸಿರಾಜುದ್ದೀನ್ ಎನ್ನಲಾಗಿದ್ದು, ಕಾಣಿಯೂರು ಸಮೀಪದ ಅಡಿಂಜೆ ನಿವಾಸಿ ಇದ್ರಿಸ್ ಅವರ ನೂತನ ಕಟ್ಟಡದಲ್ಲಿರುವ ಮೂರು ಮನೆಗಳನ್ನು ಬಾಡಿಗೆಗೆ ಪಡೆದು ಅಲ್ಲಿ ನಕಲಿ ನೋಟು ತಯಾರಿಕಾ ಘಟಕವನ್ನು ನಡೆಸಲಾಗುತ್ತಿತ್ತು. ಯಾರಿಗೂ ಅನುಮಾನ ಬಾರದ ರೀತಿಯಲ್ಲಿ ಈ ಕಾರ್ಖಾನೆಯನ್ನು ಕಾರ್ಯನಿರ್ವಹಿಸಲಾಗುತ್ತಿತ್ತು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.
ಖಚಿತ ಮಾಹಿತಿ ಮೇರೆಗೆ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ನೇತೃತ್ವದ ವಿಶೇಷ ಪೊಲೀಸ್ ತಂಡ ದಾಳಿ ನಡೆಸಿ, ನಕಲಿ ನೋಟು ಮುದ್ರಣ ನಡೆಯುತ್ತಿದ್ದ ಸ್ಥಳವನ್ನು ಪತ್ತೆಹಚ್ಚಿದೆ. ದಾಳಿ ವೇಳೆ ಮುದ್ರಣ ಪ್ರಕ್ರಿಯೆಗೆ ಅಗತ್ಯವಿದ್ದ ವಿವಿಧ ಉಪಕರಣಗಳು ಹಾಗೂ ಸಾಮಗ್ರಿಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದು, ಈ ಜಾಲದ ಸಂಪರ್ಕ ರಾಜ್ಯದ ಹೊರಗೂ ಇದೆಯೇ ಹಾಗೂ ಈಗಾಗಲೇ ಎಷ್ಟು ಪ್ರಮಾಣದ ನಕಲಿ ನೋಟುಗಳನ್ನು ಚಲಾವಣೆಗೆ ತರಲಾಗಿದೆ ಎಂಬ ಕುರಿತು ತನಿಖೆ ಮುಂದುವರಿದಿದೆ.








