ಉಡುಪಿ : ಮುಂಬೈನ ಕೊಲಬಾ ಸೈಬರ್ ಕ್ರೈಂ ಹಾಗೂ ಇ.ಡಿ ಅಧಿಕಾರಿಗಳ ಸೋಗಿನಲ್ಲಿ ನಿವೃತ್ತ ಬ್ಯಾಂಕ್ ಉದ್ಯೋಗಿಯೊಬ್ಬರಿಗೆ ವಾಟ್ಸಾಪ್ ವಿಡಿಯೋ ಕಾಲ್ ಮಾಡಿ, ಕೋಟ್ಯಂತರ ರೂಪಾಯಿ ಮನಿ ಲಾಂಡರಿಂಗ್ ಆರೋಪದಡಿ ಬೆದರಿಸಿ ಬರೋಬ್ಬರಿ 22 ಲಕ್ಷ ರೂಪಾಯಿ ಹಣವನ್ನು ದೋಚಿರುವ ಸೈಬರ್ ವಂಚನೆ ಪ್ರಕರಣ ಉಡುಪಿ ಸೈಬರ್ ಕ್ರೈಂ (CEN) ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ಉಡುಪಿ ತಾಲೂಕಿನ ನಿವಾಸಿ, ನಿವೃತ್ತ ಬ್ಯಾಂಕ್ ಉದ್ಯೋಗಿ ಹೈಟೆಕ್ ಕಳ್ಳರ ಜಾಲಕ್ಕೆ ಸಿಲುಕಿ ಲಕ್ಷಾಂತರ ರೂಪಾಯಿ ಕಳೆದುಕೊಂಡ ದುರ್ದೈವಿಯಾಗಿದ್ದಾರೆ.
ಜುಲೈ 10 ರಂದು ಮಧ್ಯಾಹ್ನ ಸುಮಾರು 3 ಗಂಟೆಗೆ ಜಯಕರ ಕಾಮತ್ ಅವರ ಮೊಬೈಲ್ಗೆ ಅಪರಿಚಿತ ನಂಬರ್ನಿಂದ ವಾಟ್ಸಾಪ್ ವಿಡಿಯೋ ಕಾಲ್ ಬಂದಿತ್ತು. ಕರೆ ಸ್ವೀಕರಿಸಿದಾಗ ಎದುರಿದ್ದ ವ್ಯಕ್ತಿ ಪೊಲೀಸ್ ಯುನಿಫಾರ್ಮ್ ಧರಿಸಿದ್ದನು. “ನಾವು ಮುಂಬೈನ ಕೊಲಬಾ ಸೈಬರ್ ಕ್ರೈಂ ಠಾಣೆಯಿಂದ ಮಾತನಾಡುತ್ತಿದ್ದೇವೆ. ಮುಂಬೈನ ಕೆನರಾ ಬ್ಯಾಂಕ್ನಲ್ಲಿ ನಿಮ್ಮ ಹೆಸರಿನಲ್ಲಿ ಖಾತೆಯಿದ್ದು, ಅದರ ಮೂಲಕ ನೂರಾರು ಕೋಟಿ ರೂಪಾಯಿ ಮನಿ ಲಾಂಡರಿಂಗ್ (ಅಕ್ರಮ ಹಣ ವರ್ಗಾವಣೆ) ನಡೆದಿದೆ” ಎಂದು ಬ್ಯಾಂಕ್ ಸ್ಟೇಟ್ಮೆಂಟ್ ಹಾಗೂ ಎಟಿಎಂ ಕಾರ್ಡ್ ತೋರಿಸಿ ಜಯಕರ ಅವರನ್ನು ತೀವ್ರ ಆತಂಕಕ್ಕೆ ತಳ್ಳಿದ್ದಾನೆ.
ಇದಾದ ಬಳಿಕ ಜುಲೈ 11 ರಿಂದ ಜುಲೈ 16 ರವರೆಗೆ ಸತತ 5 ದಿನಗಳ ಕಾಲ 7815889979 ನಂಬರ್ನಿಂದ ಪದೇ ಪದೇ ವಾಟ್ಸಾಪ್ ಕರೆಗಳನ್ನು ಮಾಡಲಾಗಿದೆ. ತಾವೇ ಉನ್ನತ ಪೊಲೀಸ್ ಅಧಿಕಾರಿ ‘ವಿಶ್ವಾಸ್ ಎಡಿಜಿಪಿ’, ‘ಅನಿಲ್ ಕುಮಾರ್’, ಇ.ಡಿ (ಜಾರಿ ನಿರ್ದೇಶನಾಲಯ) ಹಾಗೂ ಸಿಬಿಐ ಅಧಿಕಾರಿಗಳೆಂದು ಸೋಗು ಹಾಕಿದ ವಂಚಕರು, ಜಯಕರ ಅವರನ್ನು ಸಂಪೂರ್ಣವಾಗಿ ತಮ್ಮ ನಿಯಂತ್ರಣಕ್ಕೆ (Digital Arrest) ತಂದುಕೊಂಡಿದ್ದಾರೆ. “ನಿಮ್ಮ ಬ್ಯಾಂಕ್ ಖಾತೆಯಲ್ಲಿರುವ ಹಣವನ್ನು ಫಂಡ್ ವೆರಿಫಿಕೇಶನ್ (ಖಾತೆ ತಪಾಸಣೆ) ಮಾಡಬೇಕಿದೆ. ತಪಾಸಣೆ ಮುಗಿದ ತಕ್ಷಣ ಹಣ ವಾಪಸ್ ಬರುತ್ತದೆ” ಎಂದು ನಂಬಿಸಿ, ಹೆದರಿಸಿ ಆರ್ ಟಿ ಜಿ ಎಸ್ (RTGS) ಮೂಲಕ ಹಂತಹಂತವಾಗಿ ಒಟ್ಟು 22 ಲಕ್ಷ ರೂಪಾಯಿ ಹಣವನ್ನು ವಂಚಕರು ತಾವೇ ನೀಡಿದ ಬ್ಯಾಂಕ್ ಖಾತೆಗಳಿಗೆ ವರ್ಗಾವಣೆ ಮಾಡಿಸಿಕೊಂಡಿದ್ದಾರೆ.
ಹಣ ವರ್ಗಾವಣೆಯಾದ ಬಳಿಕ ಇದು ಸೈಬರ್ ವಂಚನೆ ಎಂದು ಅರಿತ ಜಯಕರ ಕಾಮತ್ ಅವರು ಉಡುಪಿ ಸೈಬರ್ ಠಾಣೆಗೆ ದೂರು ನೀಡಿದ್ದಾರೆ. ಸದ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಆರೋಪಿಗಳ ಪತ್ತೆಗೆ ತನಿಖೆ ಕೈಗೊಂಡಿದ್ದಾರೆ.








