ನವದೆಹಲಿ: ರಾಜೀನಾಮೆ ನೀಡುವಂತೆ ಒತ್ತಾಯಿಸಿದ್ದ ಪ್ರಮುಖ ಬೇಡಿಕೆ ಈಡೇರಿದರೂ, ಹೋರಾಟ ಇನ್ನೂ ಮುಗಿದಿಲ್ಲ ಎಂದು ಕಾಕ್ರೋಚ್ ಜನತಾ ಪಕ್ಷ ಸ್ಪಷ್ಟಪಡಿಸಿದೆ.
ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಿರುವುದನ್ನು ಸ್ವಾಗತಿಸಿದ ಸಿಜೆಪಿ, ಉಳಿದ ಬೇಡಿಕೆಗಳು ಈಡೇರುವವರೆಗೂ ದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ಮುಂದುವರಿಯಲಿದೆ ಎಂದು ಘೋಷಿಸಿದೆ.
ಸಿಜೆಪಿ ತನ್ನ ನವೀಕರಿಸಿದ ಬೇಡಿಕೆಗಳ ಪಟ್ಟಿಯನ್ನು ‘X’ ಖಾತೆಯಲ್ಲಿ ಹಂಚಿಕೊಂಡಿದೆ, ಇನ್ನೂ ಮೂರು ಪ್ರಮುಖ ಬೇಡಿಕೆಗಳು ಬಾಕಿ ಉಳಿದಿವೆ ಎಂದು ತಿಳಿಸಿದೆ.
ಆತ್ಮಹತ್ಯೆ ಮಾಡಿಕೊಂಡ ಎಲ್ಲಾ ವಿದ್ಯಾರ್ಥಿಗಳ ಕುಟುಂಬಗಳಿಗೆ 1 ಕೋಟಿ ರೂ. ಪರಿಹಾರ ನೀಡಬೇಕು, ಪ್ರತಿಭಟನೆಯಲ್ಲಿ ಭಾಗವಹಿಸಿದ ಯಾವುದೇ ವಿದ್ಯಾರ್ಥಿಗಳ ವಿರುದ್ಧ ಕ್ರಮ ಕೈಗೊಳ್ಳಬಾರದು ಹಾಗೂ ಆರ್‌ಎಎಫ್ ಮತ್ತು ದೆಹಲಿ ಪೊಲೀಸರು ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕು ಎಂದು ಸಿಜೆಪಿ ಆಗ್ರಹಿಸಿದೆ.
ʼಜಂತರ್ ಮಂತರ್ ಮಾತ್ರವಲ್ಲ, ಇಡೀ ದೇಶವೇ ಈ ಬೇಡಿಕೆಗಳು ಈಡೇರುವುದನ್ನು ಕಾಯುತ್ತಿದೆ. ಅವು ಈಡೇರುವವರೆಗೂ ನಮ್ಮ ಹೋರಾಟ ನಿಲ್ಲುವುದಿಲ್ಲʼ ಎಂದು ಸಿಜೆಪಿ ಹೇಳಿದೆ.
ಧರ್ಮೇಂದ್ರ ಪ್ರಧಾನ್ ರಾಜೀನಾಮೆಯನ್ನು ಪಕ್ಷದ ಸಂಸ್ಥಾಪಕ ಅಭೀಜಿತ್ ದೀಪ್ಕೆ ಸ್ವಾಗತಿಸಿದ್ದಾರೆ. ʼಈ ಸರ್ಕಾರದಲ್ಲಿ ರಾಜೀನಾಮೆ ಆಗುವುದೇ ಇಲ್ಲ ಎಂದು ಹೇಳಲಾಗುತ್ತಿತ್ತು. ಆದರೆ ನಾವು ಅದನ್ನು ಸಾಧ್ಯ ಮಾಡಿದ್ದೇವೆ. ಇದು ಮೋದಿ ಸರ್ಕಾರದ ಮೊದಲ ರಾಜೀನಾಮೆ ಎಂದು ಅವರು ಪ್ರತಿಕ್ರಿಯಿಸಿದ್ದಾರೆ.








