ಕಾರ್ಕಳ : ಬರೋಬ್ಬರಿ 36 ವರ್ಷಗಳಿಂದ ಪೊಲೀಸರ ಕಣ್ಣು ತಪ್ಪಿಸಿ ತಲೆಮರೆಸಿಕೊಂಡಿದ್ದ ಹಳೆಯ ಪ್ರಕರಣದ ವಾರಂಟ್ ಆರೋಪಿಯೊಬ್ಬನನ್ನು ಕಾರ್ಕಳ ನಗರ ಠಾಣೆಯ ಪೊಲೀಸರು ಕಾರ್ಯಾಚರಣೆ ನಡೆಸಿ ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಕಾರ್ಕಳ ಕಸಬಾ ಗ್ರಾಮದ ರಾಮಸಮುದ್ರ ನಿವಾಸಿ ಪೀಟರ್ ಆಗಸ್ಟಿನ್ ಮಾರ್ಟೀಸ್ (60) ಬಂಧಿತ ಆರೋಪಿ. ಈತನ ವಿರುದ್ಧ 1989ರಲ್ಲಿ ಕಾರ್ಕಳ ಠಾಣೆಯಲ್ಲಿ ಅಪರಾಧ ಕ್ರಮಾಂಕ 92/1989 ರಂತೆ ಐಪಿಸಿ ಕಲಂ 143, 147, 148, 447, 448, 323, 326 ಜೊತೆಗೆ 149 ರಡಿಯಲ್ಲಿ ಗಲಭೆ, ಅಕ್ರಮ ಪ್ರವೇಶ ಹಾಗೂ ಮಾರಕ ಆಯುಧಗಳಿಂದ ಹಲ್ಲೆ ನಡೆಸಿದ ಗಂಭೀರ ಪ್ರಕರಣ ದಾಖಲಾಗಿತ್ತು. ಪ್ರಕರಣ ದಾಖಲಾದಂದಿನಿಂದ ಈತ ನ್ಯಾಯಾಲಯಕ್ಕೆ ಹಾಜರಾಗದೆ ಕಳೆದ 36 ವರ್ಷಗಳಿಂದ ತಲೆಮರೆಸಿಕೊಂಡಿದ್ದ. ಈತನ ವಿರುದ್ಧ ಕಾರ್ಕಳದ ಪಿಸಿಜೆ ಮತ್ತು ಜೆಎಂಎಫ್ಸಿ ನ್ಯಾಯಾಲಯದಲ್ಲಿ LPC 14/2004 ವಾರಂಟ್ ಜಾರಿಯಲ್ಲಿತ್ತು.
ಕಾರ್ಕಳ ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕರ ಮಾರ್ಗದರ್ಶನದಲ್ಲಿ, ಕಾರ್ಕಳ ವೃತ್ತ ನಿರೀಕ್ಷಕರು ಹಾಗೂ ಉಡುಪಿ ಮಹಿಳಾ ಠಾಣೆ ಪೊಲೀಸ್ ನಿರೀಕ್ಷಕರ ನಿರ್ದೇಶನದಂತೆ ಕಾರ್ಕಳ ನಗರ ಠಾಣೆಯ ಉಪನಿರೀಕ್ಷಕರು ಹಾಗೂ ಸಿಬ್ಬಂದಿಗಳಾದ ಹೆಚ್.ಸಿ. 2096 ಲೋಕೇಶ್ ಮತ್ತು ಹೆಚ್.ಸಿ. 83 ಸಂಜಯ್ ಅವರು ಜುಲೈ 27 ರಂದು ರಾಮಸಮುದ್ರ ಬಳಿ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಬಂಧಿತ ಆರೋಪಿಯನ್ನು ಕಾರ್ಕಳದ ಪಿಸಿಜೆ ಮತ್ತು ಜೆಎಂಎಫ್ಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಮಾನ್ಯ ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.








