ಬಾಗಲಕೋಟೆ: ಜಿಲ್ಲೆಯ ಬೀಳಗಿ ತಾಲೂಕಿನ ಗಲಗಲಿ ಗ್ರಾಮದಲ್ಲಿ ಪತ್ನಿಯನ್ನು ಹತ್ಯೆಗೈದು, ಆಕೆ ಪ್ರಾಣಕ್ಕಾಗಿ ಹೋರಾಡುತ್ತಿದ್ದ ದೃಶ್ಯವನ್ನು ಅತ್ತೆ-ಮಾವನಿಗೆ ವಿಡಿಯೋ ಕಾಲ್ ಮೂಲಕ ತೋರಿಸಿದ ಅಮಾನವೀಯ ಘಟನೆ ಬೆಳಕಿಗೆ ಬಂದಿದೆ. ಪ್ರಕರಣ ಸಂಬಂಧ ಪತಿ ಪ್ರವೀಣ್ ಜಿಗಳೂರು ಅವರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಮೃತ ಮಹಿಳೆಯನ್ನು ಭಾಗ್ಯಶ್ರೀ ಜಿಗಳೂರು (23) ಎಂದು ಗುರುತಿಸಲಾಗಿದೆ. ಪ್ರಾಥಮಿಕ ತನಿಖೆಯ ಪ್ರಕಾರ, ಪತ್ನಿಯ ಮೇಲೆ ಅನೈತಿಕ ಸಂಬಂಧ ಹೊಂದಿರುವ ಶಂಕೆಯಿಂದ ಪತಿ ಪ್ರವೀಣ್ ಜಿಗಳೂರು ಆಕೆಯೊಂದಿಗೆ ಜಗಳವಾಡಿ, ಬಳಿಕ ಕಟ್ಟಿಗೆಯಿಂದ ಹಲ್ಲೆ ನಡೆಸಿ ನೇಣು ಬಿಗಿದು ಹತ್ಯೆಗೈದಿರುವ ಆರೋಪ ಕೇಳಿಬಂದಿದೆ. ಇದಾದ ಬಳಿಕ, ಪತ್ನಿ ಪ್ರಾಣಕ್ಕಾಗಿ ಒದ್ದಾಡುತ್ತಿದ್ದ ದೃಶ್ಯವನ್ನು ಆಕೆಯ ತಂದೆ-ತಾಯಿಗೆ ವಿಡಿಯೋ ಕಾಲ್ ಮೂಲಕ ತೋರಿಸಿದ್ದಲ್ಲದೆ, ಆ ಘಟನೆಯನ್ನು ತನ್ನ ಮೊಬೈಲ್ನಲ್ಲಿ ವಿಡಿಯೊ ರೂಪದಲ್ಲೂ ಚಿತ್ರೀಕರಿಸಿದ್ದಾನೆ ಎನ್ನಲಾಗಿದೆ. ಈ ಘಟನೆ ಸ್ಥಳೀಯರಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.
ತನಿಖೆ ವೇಳೆ, ಮೃತಳು ಎರಡು ತಿಂಗಳ ಹಿಂದೆ ದಾಂಪತ್ಯ ಕಲಹದ ಹಿನ್ನೆಲೆಯಲ್ಲಿ ತವರು ಮನೆ ಮಹಾಲಿಂಗಪುರಕ್ಕೆ ತೆರಳಿದ್ದಳು ಎಂಬ ಮಾಹಿತಿ ಲಭ್ಯವಾಗಿದೆ. ಬಳಿಕ “ಇನ್ನು ಮುಂದೆ ಚೆನ್ನಾಗಿ ಜೀವನ ನಡೆಸೋಣ” ಎಂದು ಸಮಾಧಾನಪಡಿಸಿ ಜುಲೈ 27ರಂದು ಗಲಗಲಿಗೆ ಕರೆತಂದಿದ್ದ ಆರೋಪಿ, ಅದೇ ದಿನ ಸಂಜೆ ಕೃತ್ಯ ಎಸಗಿರುವ ಆರೋಪ ಎದುರಿಸುತ್ತಿದ್ದಾನೆ. ಘಟನಾ ಸ್ಥಳಕ್ಕೆ ಬೀಳಗಿ ಪೊಲೀಸರು ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿದ್ದಾರ್ಥ್ ಗೋಯೆಲ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ಮುಂದುವರಿಸಿದ್ದು, ಹತ್ಯೆಗೆ ನಿಖರ ಕಾರಣ ಹಾಗೂ ಇತರ ಅಂಶಗಳ ಕುರಿತು ತನಿಖೆ ನಡೆಸುತ್ತಿದ್ದಾರೆ.








