ಗ್ಲಾಸ್ಗೋ: 2026ರ ಕಾಮನ್‌ವೆಲ್ತ್ ಗೇಮ್ಸ್ ಕ್ರೀಡಾಕೂಟದಲ್ಲಿ ಚಿನ್ನ ಗೆಲ್ಲುವ ಮೂಲಕ ಭಾರತದ ಪ್ಯಾರಾ ಅಥ್ಲಿಟ್ ಶರ್ಮಿಳಾ ಧಂಕರ್ ಹೊಸ ಇತಿಹಾಸ ಸೃಷ್ಟಿಸಿದ್ದಾರೆ.
ಗ್ಲ್ಯಾಸ್ಗೋದಲ್ಲಿ ಮಂಗಳವಾರ ನಡೆದ ಮಹಿಳೆಯರ ಶಾಟ್‌ಪುಟ್ ಎಫ್57 ವಿಭಾಗದಲ್ಲಿ ಶರ್ಮಿಳಾ ಉತ್ತಮ ಪ್ರದರ್ಶನ ನೀಡಿದ್ದಾರೆ. ಫೈನಲ್ ಪಂದ್ಯದಲ್ಲಿ ಶರ್ಮಿಳಾ ಅವರು 9.81 ಮೀಟರ್ ದೂರಕ್ಕೆ ಗುಂಡು ಎಸೆಯುವ ಮೂಲಕ ಚಿನ್ನದ ಪದಕವನ್ನ ತಮ್ಮದಾಗಿಸಿಕೊಂಡಿದ್ದಾರೆ. ಈ ಮೂಲಕ ಭಾರತದ ಪರ ಕಾಮನ್‌ವೆಲ್ತ್ ಇತಿಹಾಸದಲ್ಲೇ ಚಿನ್ನದ ಪದಕ ಗೆದ್ದ ಮೊದಲ ಪ್ಯಾರಾ ಅಥ್ಲಿಟ್ ಎಂಬ ಹೆಗ್ಗಳಿಕೆಗೆ ಶರ್ಮಿಳಾ ಅವರು ಪಾತ್ರರಾಗಿದ್ದಾರೆ.
ಇನ್ನು ಇದೇ ಸ್ಪರ್ಧೆಯಲ್ಲಿ ಕನ್ನಡತಿ ಕೆ. ಶಿಲ್ಪಾ ಅವರು 7.26 ಮೀಟರ್ ದೂರಕ್ಕೆ ಗುಂಡು ಎಸೆಯುವ ಮೂಲಕ ಕಂಚಿನ ಪದಕಕ್ಕೆ ಕೊರಳೊಡ್ಡಿದ್ದಾರೆ. ಈ ಗೆಲುವಿನೊಂದಿಗೆ ಭಾರತಕ್ಕೆ 2 ಚಿನ್ನ, 5 ಬೆಳ್ಳಿ ಮತ್ತು 3 ಕಂಚಿನ ಪದಕ ಬಂದಿದ್ದು, ಒಟ್ಟು ಪದಕಗಳ ಸಂಖ್ಯೆ 10ಕ್ಕೆ ಏರಿಕೆಯಾಗಿದೆ.








