ನವದೆಹಲಿ: ಪ್ರಧಾನಿ ಮೋದಿ ಮಧ್ಯ ರಾತ್ರಿ ಮತ್ತೊಂದು ಹೊಸ ಸೆಲ್ಫೀ ವಿಡಿಯೋ ರಿಲೀಸ್ ಮಾಡಿದ್ದಾರೆ. ತಮ್ಮ ಸಾಮಾಜಿಕ ಜಾಲತಾಣಗಳ ಖಾತೆಗಳಲ್ಲಿ ಹಂಚಿಕೊಂಡಿರುವ ಹೊಸ ವಿಡಿಯೋದಲ್ಲಿ ಪ್ರಧಾನಿ ಮೋದಿ, ಪರೀಕ್ಷಾ ಅಕ್ರಮ ತಡೆ ವಿಧೇಯಕದ ಅಂಗೀಕಾರವು ಭಾರತಕ್ಕೆ ಒಂದು ಐತಿಹಾಸಿಕ ಕ್ಷಣವಾಗಿದೆ ಎಂದು ಹೇಳಿದ್ದಾರೆ. ಹಾಗೇ, ಪ್ರಶ್ನೆಪತ್ರಿಕೆ ಸೋರಿಕೆ ಮಾಫಿಯಾಗೆ ಕ್ಷಮೆಯೇ ಇಲ್ಲ ಎಂದಿದ್ದಾರೆ.
ಪರೀಕ್ಷಾ ವಂಚನೆ ಮತ್ತು ಅಕ್ರಮಗಳಲ್ಲಿ ಭಾಗಿಯಾಗಿರುವವರಿಗೆ ಪ್ರಧಾನಮಂತ್ರಿ ಮೋದಿ ಕಠಿಣ ಎಚ್ಚರಿಕೆಯನ್ನು ನೀಡಿದರು. ಯಾವುದೇ ಪೇಪರ್ ಮಾಫಿಯಾ, ಪ್ರಶ್ನೆ ಪತ್ರಿಕೆ ಸೋರಿಕೆಯಲ್ಲಿ ಭಾಗಿಯಾಗಿರುವ ಯಾವುದೇ ಗ್ಯಾಂಗ್ ಮತ್ತು ದೇಶದ ಮಕ್ಕಳ ಭವಿಷ್ಯದ ಜೊತೆ ಆಟವಾಡುವ ಯಾವುದೇ ಪಡೆಯನ್ನು ಬಿಡುವ ಪ್ರಶ್ನೆಯೇ ಇಲ್ಲ ಎಂದು ಮೋದಿ ಖಡಕ್ ಎಚ್ಚರಿಕೆ ನೀಡಿದ್ದಾರೆ.
ವಿಕಸಿತ ಭಾರತದ ಕನಸನ್ನು ನನಸು ಮಾಡಲು ಇಡೀ ದೇಶವೇ ಒಟ್ಟಾಗಿ ಮುನ್ನಡೆಯಬೇಕಿದೆ. ಪರೀಕ್ಷಾ ವ್ಯವಸ್ಥೆಯನ್ನು ಇನ್ನಷ್ಟು ಬಲಪಡಿಸಲು ಮುಂಬರುವ ದಿನಗಳಲ್ಲಿ ಇನ್ನಷ್ಟು ಕ್ರಮಗಳನ್ನು ಕೈಗೊಳ್ಳಲಾಗುವುದು. ದಶಕಗಳಿಂದಲೂ ಸತತವಾಗಿ ಬಂದ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಪ್ರಶ್ನೆ ಪತ್ರಿಕೆ ಸೋರಿಕೆ ಘಟನೆಗಳನ್ನು ಎದುರಿಸುತ್ತಲೇ ಬಂದಿವೆ. ಹೀಗಾಗಿಯೇ ಪರೀಕ್ಷಾ ಸುಧಾರಣೆಗಳನ್ನು ತರುವುದು ಅತ್ಯಗತ್ಯವಾಗಿತ್ತು” ಎಂದು ಹೇಳಿದ್ದಾರೆ.
ಇದನ್ನು ಎದುರಿಸಲು ನಮಗೆ ಕಠಿಣ ಕಾನೂನುಗಳ ಅಗತ್ಯವಿತ್ತು. ನಾವು ಸಂಸತ್ತಿನಲ್ಲಿ ವಿಧೇಯಕವನ್ನು ಮಂಡಿಸಿದೆವು, ಮತ್ತು ನಾನು ನಿಮಗೆ ವಾಗ್ದಾನ ನೀಡಿದಂತೆ, ಸಂಸತ್ತಿನ ಎರಡೂ ಮನೆಗಳಲ್ಲಿ ಅಪಾರ ಸಂಖ್ಯೆಯ ಸಂಸದರ ಭಾಗವಹಿಸುವಿಕೆಯೊಂದಿಗೆ ಈ ಕುರಿತು ಸುದೀರ್ಘ ಚರ್ಚೆಗಳು ನಡೆದಿವೆ ಎಂದು ಪ್ರಧಾನಿಯವರು ತಮ್ಮ 2.26 ನಿಮಿಷಗಳ ವೀಡಿಯೊದಲ್ಲಿ ತಿಳಿಸಿದ್ದಾರೆ.








