ಉಡುಪಿ: ಅಪ್ರಾಪ್ತರು ಹಾಗೂ ಕಾನೂನುಬದ್ಧ ವಯಸ್ಸಿಗಿಂತ ಕಡಿಮೆ ವಯಸ್ಸಿನ ಯುವಕರಿಗೆ ಮದ್ಯ ಸೇವಿಸಲು ಅವಕಾಶ ನೀಡಿದ ಆರೋಪದಡಿ ಉಡುಪಿ ಜಿಲ್ಲಾ ಪೊಲೀಸರು ಮಣಿಪಾಲದ ಆರು ಪಬ್ ಮತ್ತು ಬಾರ್‌ಗಳ ವಿರುದ್ಧ ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿದ್ದಾರೆ.
ಮಣಿಪಾಲ ಪೊಲೀಸ್ ಠಾಣಾ ವ್ಯಾಪ್ತಿಯ ಕೆಲವು ಪಬ್ ಹಾಗೂ ಬಾರ್‌ಗಳಲ್ಲಿ ವಿದ್ಯಾರ್ಥಿಗಳಿಗೆ ಹುಕ್ಕಾ ಸೇದುವ ಅವಕಾಶ ನೀಡಲಾಗುತ್ತಿದೆ ಹಾಗೂ 21 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಮದ್ಯ ಪೂರೈಕೆ ಮಾಡಲಾಗುತ್ತಿದೆ ಎಂಬ ಮಾಹಿತಿ ಮೇರೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಸೂಚನೆಯಂತೆ ದಿಢೀರ್ ತಪಾಸಣೆ ನಡೆಸಲಾಯಿತು. ಈ ವೇಳೆ ಸಿಗರೇಟ್ ಮತ್ತು ಇತರೆ ತಂಬಾಕು ಉತ್ಪನ್ನಗಳ ಕಾಯ್ದೆ, ಕರ್ನಾಟಕ ಅಬಕಾರಿ ಪರವಾನಗಿ ಷರತ್ತುಗಳು ಹಾಗೂ ಕರ್ನಾಟಕ ಅಬಕಾರಿ ಕಾಯ್ದೆಯ ಉಲ್ಲಂಘನೆ ನಡೆದಿರುವುದು ಬೆಳಕಿಗೆ ಬಂದಿದೆ.
ಮಣಿಪಾಲ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಮಹೇಶ್ ಪ್ರಸಾದ್ ನೇತೃತ್ವದಲ್ಲಿ ಮಣಿಪಾಲ, ಮಲ್ಪೆ, ಹಿರಿಯಡ್ಕ, ಕೋಟ ಹಾಗೂ ಉಡುಪಿ ಮಹಿಳಾ ಪೊಲೀಸ್ ಠಾಣೆಗಳ 20 ಹೆಚ್ಚು ಸಿಬ್ಬಂದಿಯನ್ನು ಒಳಗೊಂಡ ಆರು ವಿಶೇಷ ತಂಡಗಳನ್ನು ರಚಿಸಿ ಏಕಕಾಲದಲ್ಲಿ ಕಾರ್ಯಾಚರಣೆ ನಡೆಸಲಾಯಿತು.
ಕಾರ್ಯಾಚರಣೆಯಲ್ಲಿ ಎಕ್ಸ್ಟಸಿ 7th ಹೆವನ್ ಪಬ್, ಸಾಯಿ ಸಾಗರ್ ಬಾರ್ & ರೆಸ್ಟೋರೆಂಟ್, ಡೌನ್ ದ ರೋಡ್ ಬಾರ್ & ರೆಸ್ಟೋರೆಂಟ್, ಡೆಕ್ಸ್ಟರ್ ಬಾರ್ & ರೆಸ್ಟೋರೆಂಟ್, ಡಿ ಟೀ ಬಾರ್ & ರೆಸ್ಟೋರೆಂಟ್ ಹಾಗೂ ಜನನಿ ಬಾರ್ & ರೆಸ್ಟೋರೆಂಟ್ ಮೇಲೆ ದಾಳಿ ನಡೆಸಲಾಯಿತು.
ತಪಾಸಣೆ ವೇಳೆ 21 ವರ್ಷಕ್ಕಿಂತ ಕಡಿಮೆ ವಯಸ್ಸಿನ 64 ಯುವಕರು ಹಾಗೂ 23 ಯುವತಿಯರು ಮದ್ಯ ಸೇವಿಸುತ್ತಿರುವುದು ಪತ್ತೆಯಾಗಿದೆ. ಅಲ್ಲದೆ, ಒಂದು ಪಬ್‌ನಲ್ಲಿ 17 ವರ್ಷದ ಅಪ್ರಾಪ್ತ ಬಾಲಕನೂ ಪತ್ತೆಯಾಗಿದ್ದಾನೆ.
ಆರು ಸ್ಥಳಗಳಲ್ಲೂ ಸ್ಥಳ ಮಹಜರು ನಡೆಸಿ ವರದಿಯನ್ನು ಮಣಿಪಾಲ ಪೊಲೀಸ್ ಠಾಣೆಗೆ ಸಲ್ಲಿಸಲಾಗಿದೆ. ತನಿಖೆಯ ಆಧಾರದ ಮೇಲೆ ಎಲ್ಲಾ ಆರು ಪಬ್ ಮತ್ತು ಬಾರ್‌ಗಳ ಮಾಲೀಕರು ಹಾಗೂ ವ್ಯವಸ್ಥಾಪಕರ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ಹೆಚ್ಚಿನ ತನಿಖೆ ಮುಂದುವರಿದಿದೆ.
ಅಪ್ರಾಪ್ತರು ಹಾಗೂ 21 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಪ್ರವೇಶ ನೀಡಿ ಮದ್ಯ ಸೇವಿಸಲು ಅವಕಾಶ ನೀಡಿದ ಆರೋಪದ ಹಿನ್ನೆಲೆಯಲ್ಲಿ ಸಂಬಂಧಿತ ಪಬ್ ಮತ್ತು ಬಾರ್‌ಗಳ ಪರವಾನಗಿಯನ್ನು ಅಮಾನತುಗೊಳಿಸುವಂತೆ ಉಡುಪಿ ಜಿಲ್ಲಾಧಿಕಾರಿಗೆ ಶಿಫಾರಸು ಮಾಡುವ ಪ್ರಕ್ರಿಯೆಯನ್ನೂ ಪೊಲೀಸರು ಪರಿಶೀಲಿಸುತ್ತಿದ್ದಾರೆ.
ಮುಂದಿನ ದಿನಗಳಲ್ಲಿಯೂ ಇಂತಹ ದಿಢೀರ್ ತಪಾಸಣೆಗಳನ್ನು ಮುಂದುವರಿಸಲಾಗುವುದು ಎಂದು ಉಡುಪಿ ಜಿಲ್ಲಾ ಪೊಲೀಸರು ತಿಳಿಸಿದ್ದಾರೆ. COTPA ಹಾಗೂ ಕರ್ನಾಟಕ ಅಬಕಾರಿ ಕಾಯ್ದೆ ಉಲ್ಲಂಘಿಸಿ ಅಪ್ರಾಪ್ತರು ಅಥವಾ 21 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಪ್ರವೇಶ, ಹುಕ್ಕಾ ಸೇವನೆ ಅಥವಾ ಮದ್ಯ ಸೇವನೆಗೆ ಅವಕಾಶ ನೀಡುವ ಯಾವುದೇ ಪಬ್ ಅಥವಾ ಬಾರ್ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.








