ಗಾಜಿಯಾಬಾದ್: ಸುಮಾರು ಒಂದೂವರೆ ವರ್ಷಗಳ ಹಿಂದೆ ವಿಚ್ಛೇದನ ಪಡೆದಾಗಿನಿಂದ ತೀವ್ರ ಖಿನ್ನತೆ ಹಾಗೂ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ 40 ವರ್ಷದ ಮಹಿಳಾ ಮನೋವೈದ್ಯೆಯೊಬ್ಬರು ಅಪಾರ್ಟ್ಮೆಂಟ್ನ ಐದನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಭೀಕರ ಘಟನೆ ಉತ್ತರ ಪ್ರದೇಶದ ಗಾಜಿಯಾಬಾದ್ನಲ್ಲಿ ಭಾನುವಾರ ಸಂಭವಿಸಿದೆ.
ಮೃತಪಟ್ಟ ವೈದ್ಯೆಯನ್ನು ಡಾ. ಹೆಮಿಕಾ ಅಗರ್ವಾಲ್ (40) ಎಂದು ಗುರುತಿಸಲಾಗಿದೆ. ಈಕೆಯ ತಂದೆ ಡಾ. ಆರ್. ಚಂದ್ರ ಅವರು ಗಾಜಿಯಾಬಾದ್ನ ಪ್ರಸಿದ್ಧ ಮನೋವೈದ್ಯರಾಗಿದ್ದಾರೆ. ಡಾ. ಹೆಮಿಕಾ ಅವರು ರಾಜ್ ನಗರ ವಿಸ್ತರಣಾ ಪ್ರದೇಶದ ‘ಆಫೀಸರ್ಸ್ ಸಿಟಿ -2’ ಸೊಸೈಟಿಯಲ್ಲಿರುವ ತಮ್ಮ ಐದನೇ ಮಹಡಿಯ ಫ್ಲಾಟ್ನಿಂದ ಕೆಳಗೆ ಹಾರಿದ್ದಾರೆ. ತೀವ್ರವಾಗಿ ಗಾಯಗೊಂಡಿದ್ದ ಅವರನ್ನು ತಕ್ಷಣವೇ ಸ್ಥಳೀಯ ನಿವಾಸಿಗಳು ಹತ್ತಿರದ ಆಸ್ಪತ್ರೆಗೆ ದಾಖಲಿಸಿದರಾದರೂ, ಅಷ್ಟರಲ್ಲಾಗಲೇ ಅವರು ಮೃತಪಟ್ಟಿರುವುದಾಗಿ ವೈದ್ಯರು ದೃಢಪಡಿಸಿದ್ದಾರೆ.
ಘಟನೆ ಕುರಿತು ಪ್ರತಿಕ್ರಿಯಿಸಿರುವ ಮೃತರ ತಂದೆ ಡಾ. ಆರ್. ಚಂದ್ರ, ಸುಮಾರು 18 ತಿಂಗಳ ಹಿಂದೆ ಮಗಳ ವೈವಾಹಿಕ ಜೀವನ ಮುರಿದುಬಿದ್ದಿತ್ತು. ವಿಚ್ಛೇದನದ ನಂತರ ಆಕೆಯ ಮಾನಸಿಕ ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀರಿದ್ದು, ಸತತ ಮಾನಸಿಕ ಒತ್ತಡ ಹಾಗೂ ಖಿನ್ನತೆಗೆ ಒಳಗಾಗಿದ್ದಳು ಎಂದು ತಿಳಿಸಿದ್ದಾರೆ. ಘಟನಾ ಸ್ಥಳದಲ್ಲಿ ಯಾವುದೇ ಡೆತ್ನೋಟ್ ಪತ್ತೆಯಾಗಿಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದ್ದು, ಮರಣೋತ್ತರ ಪರೀಕ್ಷೆಯ ವರದಿ ಹಾಗೂ ಕುಟುಂಬಸ್ಥರ ಹೇಳಿಕೆಗಳ ಆಧಾರದ ಮೇಲೆ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.








