ಬೆಂಗಳೂರು : ರಾಜ್ಯದಲ್ಲಿ ಗುಟ್ಕಾ ಹಾಗೂ ಪಾನ್ ಮಸಾಲ ನಿಷೇಧಿಸಿ ಹೊರಡಿಸಲಾದ ಆದೇಶವನ್ನು ಹಿಂಪಡೆದಿಲ್ಲ ಎಂದು ಆರೋಗ್ಯ ಸಚಿವ ಯು.ಟಿ. ಖಾದರ್ ಸ್ಪಷ್ಟಪಡಿಸಿದ್ದಾರೆ.
ವಿಧಾನಸೌಧದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, “ಪಾನ್ ಮಸಾಲದಲ್ಲಿ ನಿಕೋಟಿನ್ ಇರಬಾರದು ಎಂದು ನೀಡಲಾದ ಆದೇಶ ಜನರ ಆರೋಗ್ಯದ ಹಿತದೃಷ್ಟಿಯಿಂದ ಕೈಗೊಂಡಿರುವ ನಿರ್ಧಾರವಾಗಿದೆ. ಇದರಿಂದ ಕರಾವಳಿ ಹಾಗೂ ಮಲೆನಾಡಿನ ಅಡಿಕೆ ಬೆಳೆಗಾರರಿಗೆ ಅಥವಾ ವ್ಯಾಪಾರಿಗಳಿಗೆ ಯಾವುದೇ ರೀತಿಯ ತೊಂದರೆಯಾಗುವುದಿಲ್ಲ” ಎಂದು ಅಭಯ ನೀಡಿದರು.
ಗುಟ್ಕಾ ತಯಾರಿಕೆಗೆ ನಮ್ಮ ದೇಶದ ಅಡಿಕೆಯನ್ನು ಯಾರೂ ಬಳಕೆ ಮಾಡುವುದಿಲ್ಲ. ಬದಲಿಗೆ ನೇಪಾಳ ಮತ್ತು ಬಾಂಗ್ಲಾದೇಶದಿಂದ ಆಮದು ಮಾಡಿಕೊಳ್ಳುವ ಅಡಿಕೆಯನ್ನು ಬಳಸಲಾಗುತ್ತದೆ. ಈ ಹಿಂದೆ ಗುಟ್ಕಾ ನಿಷೇಧಿಸಿದಾಗಲೂ ಅಡಿಕೆ ಬೆಲೆ ಕುಸಿಯುತ್ತದೆ ಎಂಬ ಆತಂಕವಿತ್ತು. ಆದರೆ ನಿಷೇಧದ ಮೂರು ತಿಂಗಳ ಬಳಿಕ ಅಡಿಕೆ ಬೆಲೆ ಗಣನೀಯವಾಗಿ ಹೆಚ್ಚಾಗಿತ್ತು. ಪ್ರಸ್ತುತ ನಿಕೋಟಿನ್ ನಿಷೇಧದ ನಿರ್ಧಾರದಿಂದಲೂ ಅಡಿಕೆ ಬೆಲೆ ಹೆಚ್ಚಾಗುವ ಸಾಧ್ಯತೆಯಿದೆಯೇ ವಿನಃ ಕುಸಿಯುವುದಿಲ್ಲ” ಎಂದು ಸಚಿವರು ಸಮರ್ಥಿಸಿಕೊಂಡರು.
ಮುಖ್ಯಮಂತ್ರಿಗಳೊಂದಿಗೂ ಈ ವಿಚಾರವಾಗಿ ಚರ್ಚಿಸಿ ಸ್ಪಷ್ಟನೆ ನೀಡಿರುವುದಾಗಿ ತಿಳಿಸಿದ ಸಚಿವರು, “ಆರೋಗ್ಯ ಇಲಾಖೆ ಹಾಗೂ ರಾಜ್ಯ ಸರ್ಕಾರವು ರೈತರು ಮತ್ತು ವ್ಯಾಪಾರಿಗಳಿಗೆ ಸಂಪೂರ್ಣ ಬೆಂಬಲ ನೀಡಲಿದೆ. ಅಡಿಕೆ ಬೆಳೆಗಾರರಿಗೆ ತೊಂದರೆ ಕೊಡುವ ಕೆಲಸವನ್ನು ಸರ್ಕಾರ ಎಂದಿಗೂ ಮಾಡುವುದಿಲ್ಲ. ಸಾರ್ವಜನಿಕರು ಹಾಗೂ ಬೆಳೆಗಾರರು ಕನಿಷ್ಠ ಒಂದು ತಿಂಗಳ ಕಾಲ ಕಾಯ್ದು ನೋಡಲಿ. ಒಂದು ವೇಳೆ ಬೆಳೆಗಾರರಿಗೆ ನಷ್ಟ ಉಂಟಾದರೆ ಸರ್ಕಾರವೇ ಅಗತ್ಯ ವ್ಯವಸ್ಥೆ ಕಲ್ಪಿಸಿ ರಕ್ಷಣೆಗೆ ನಿಲ್ಲಲಿದೆ” ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು








