ಉತ್ತರ ಪ್ರದೇಶ: ಫ್ರಿಜ್‌ನಲ್ಲಿಟ್ಟಿದ್ದ ರಸ್ಮಲೈ ತಿಂದ ವಿಚಾರಕ್ಕೆ ಸಂಬಂಧಿಸಿದಂತೆ ಎರಡು ಸಹೋದರರ ಕುಟುಂಬಗಳ ನಡುವೆ ಉಂಟಾದ ಜಗಳ ವಿಕೋಪಕ್ಕೆ ತಿರುಗಿ ದಂಪತಿಯ ಮೇಲೆ ಕತ್ತರಿ ಮೂಲಕ ಹಲ್ಲೆ ನಡೆಸಿರುವ ಘಟನೆ ಉತ್ತರ ಪ್ರದೇಶದ ಉನ್ನಾವ್ ಜಿಲ್ಲೆಯ ಬಂಗಾರಮೌ ಪಟ್ಟಣದಲ್ಲಿ ನಡೆದಿದೆ.
ಘಟನೆ ಭಾನುವಾರ ರಾತ್ರಿ ನಡೆದಿದ್ದು, ಶಾನು ಅವರ ಪತ್ನಿ ಸಾಬ್ರೀನ್ ಅವರು ಫ್ರಿಜ್‌ನಲ್ಲಿದ್ದ ರಸ್ಮಲೈಯನ್ನು ಮಕ್ಕಳಿಗೆ ಹಂಚಿ, ತಾವೂ ಸೇವಿಸಿದ್ದರು. ಈ ವಿಚಾರ ತಿಳಿದ ಶಾನು ಅವರ ಸಹೋದರ ನೂರ್ ಹಾಗೂ ಅವರ ಪತ್ನಿ ಫಾತ್ಮಾ ಆಕ್ಷೇಪ ವ್ಯಕ್ತಪಡಿಸಿದ್ದು, ಸಾಬ್ರೀನ್ ಅವರೊಂದಿಗೆ ಮಾತಿನ ಚಕಮಕಿ ಆರಂಭವಾಗಿದೆ.
ಆರಂಭದಲ್ಲಿ ಮಾತಿನ ವಾಗ್ವಾದವಾಗಿದ್ದ ಘಟನೆ ಬಳಿಕ ತೀವ್ರ ಜಗಳವಾಗಿ ಮಾರ್ಪಟ್ಟಿದೆ. ಈ ವೇಳೆ ನೂರ್ ಹಾಗೂ ಫಾತ್ಮಾ ಅವರು ಕತ್ತರಿಯಿಂದ ಶಾನು ಮತ್ತು ಸಾಬ್ರೀನ್ ಮೇಲೆ ದಾಳಿ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ದಾಳಿಯಲ್ಲಿ ಇಬ್ಬರಿಗೂ ಗಂಭೀರ ಗಾಯಗಳಾಗಿದ್ದು, ಕುಟುಂಬಸ್ಥರು ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ಇಬ್ಬರಿಗೂ ಚಿಕಿತ್ಸೆ ಮುಂದುವರಿದಿದೆ.
ಘಟನೆ ಕುರಿತು ಸಂತ್ರಸ್ತ ಕುಟುಂಬದವರು ಪೊಲೀಸರಿಗೆ ದೂರು ನೀಡಿದ್ದು, ದೂರಿನ ಆಧಾರದ ಮೇಲೆ ನೂರ್ ಮತ್ತು ಫಾತ್ಮಾ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಸಣ್ಣದೊಂದು ಸಿಹಿತಿಂಡಿ ತಿನ್ನುವ ವಿಚಾರ ಎರಡು ಕುಟುಂಬಗಳ ನಡುವಿನ ಸಂಘರ್ಷಕ್ಕೆ ಕಾರಣವಾಗಿರುವುದು ಸ್ಥಳೀಯರಲ್ಲಿ ಚರ್ಚೆಗೆ ಕಾರಣವಾಗಿದೆ.








