ಮಂಗಳೂರಿನ ಪ್ರಸಿದ್ಧ ವೈದ್ಯ ಹಾಗೂ ಡಾ.ಸಿ.ಆರ್. ಬಲ್ಲಾಳ್ ಅವರ ಪುತ್ರ, ಕೆಎಸ್ ಹೆಗ್ಡೆ ಮೆಡಿಕಲ್ ಅಕಾಡೆಮಿಯ ಪ್ರೊಫೆಸರ್ ಮತ್ತು ಜನರಲ್ ಸರ್ಜನ್ ಆಗಿದ್ದ ಡಾ. ರಾಜೇಶ್ ಬಲ್ಲಾಳ್ (60) ಅವರು ಅಲ್ಪಕಾಲದ ಅಸೌಖ್ಯದಿಂದ ನಿಧನರಾಗಿದ್ದಾರೆ.
ಮಂಗಳೂರಿನ ಕೊಡಿಯಾಲಬೈಲಿನ ನಿವಾಸದಲ್ಲಿ ಸೋಮವಾರ ಬೆಳಗ್ಗೆ ನಿಧನರಾಗಿರುವ ಸುದ್ದಿ ತಿಳಿಯುತ್ತಿದ್ದಂತೆ ನಗರದ ಹಲವು ಹಿರಿಯ ವೈದ್ಯರು ಆಗಮಿಸಿ ಅಂತಿಮ ನಮನ ಸಲ್ಲಿಸಿದರು. ಜನರಲ್ ಫಿಸಿಶಿಯನ್ ಆಗಿದ್ದ ರಾಜೇಶ್ ಬಲ್ಲಾಳ್ ಅವರು ಲ್ಯಾಪರೊಸ್ಕೋಪಿಕ್ ಹಾಗೂ ಎಂಡೋಸ್ಕೋಪಿಕ್ ಸರ್ಜರಿಯಲ್ಲಿ ಪರಿಣತಿ ಹೊಂದಿದ್ದು, ದೇರಳಕಟ್ಟೆಯ ಕೆಎಸ್ ಹೆಗ್ಡೆ ಮೆಡಿಕಲ್ ಕಾಲೇಜಿನ ಜನರಲ್ ಸರ್ಜರಿ ವಿಭಾಗದಲ್ಲಿ ಪ್ರೊಫೆಸರ್ ಆಗಿ ಸೇವೆ ಸಲ್ಲಿಸುತ್ತಿದ್ದರು.
ಅವರು ಹಲವು ಆಸ್ಪತ್ರೆಗಳಲ್ಲಿ ತುರ್ತು ಸಂದರ್ಭಗಳಲ್ಲಿ ಸೇವೆ ಸಲ್ಲಿಸುವುದರ ಜೊತೆಗೆ ತಮ್ಮದೇ ಕ್ಲಿನಿಕ್ ಮೂಲಕವೂ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದರು. 2013-14ರಲ್ಲಿ ಇಂಡಿಯನ್ ಮೆಡಿಕಲ್ ಅಸೋಸಿಯೇಶನ್ನ ಮಂಗಳೂರು ಘಟಕದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು. ಇದಕ್ಕೂ ಮೊದಲು ಸುಮಾರು 13 ವರ್ಷಗಳ ಕಾಲ ಕೆಎಂಸಿ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸಿದ್ದರು. ಕಳೆದ ಕೆಲವು ತಿಂಗಳಿಂದ ಲಿವರ್ ಸಂಬಂಧಿತ ಕಾಯಿಲೆಯಿಂದ ಅವರ ಆರೋಗ್ಯ ಹದಗೆಟ್ಟಿತ್ತು








