ಮಂಗಳೂರು: ಮುಂಬರುವ ಹಬ್ಬಗಳ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆಯಲಿರುವ ಸಾರ್ವಜನಿಕ ಕಾರ್ಯಕ್ರಮಗಳು, ಧಾರ್ಮಿಕ ಆಚರಣೆಗಳು ಹಾಗೂ ಮೆರವಣಿಗೆಗಳಿಗೆ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸರು ಹಲವು ಕಠಿಣ ಷರತ್ತುಗಳನ್ನು ವಿಧಿಸಿದ್ದಾರೆ. ಸಾರ್ವಜನಿಕ ಶಾಂತಿ, ಸುರಕ್ಷತೆ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಈ ಮಾರ್ಗಸೂಚಿಗಳನ್ನು ಪ್ರಕಟಿಸಲಾಗಿದ್ದು, ಕಾರ್ಯಕ್ರಮ ಆಯೋಜಕರು ಕಡ್ಡಾಯವಾಗಿ ಪಾಲಿಸುವಂತೆ ಸೂಚಿಸಲಾಗಿದೆ. ಪೊಲೀಸ್ ಹಾಗೂ ಸಂಬಂಧಿತ ಇಲಾಖೆಗಳ ಲಿಖಿತ ಅನುಮತಿ ಇಲ್ಲದೆ ಯಾವುದೇ ಕಾರ್ಯಕ್ರಮ ಅಥವಾ ಮೆರವಣಿಗೆ ನಡೆಸುವಂತಿಲ್ಲ. ರಾತ್ರಿ 11.30ರ ನಂತರ ಮೆರವಣಿಗೆ ನಡೆಸಲು ಅವಕಾಶ ಇರುವುದಿಲ್ಲ.
ಮುಖ್ಯವಾಗಿ, ಕಾರ್ಯಕ್ರಮಗಳಲ್ಲಿ ಡಿಜೆ ಹಾಗೂ ಜೋರಾದ ಸ್ಪೀಕರ್ಗಳ ಬಳಕೆಯನ್ನು ಸಂಪೂರ್ಣ ನಿಷೇಧಿಸಲಾಗಿದೆ. ಧ್ವನಿವರ್ಧಕ ಬಳಸಲು ಪೂರ್ವಾನುಮತಿ ಕಡ್ಡಾಯವಾಗಿದ್ದು, ರಾತ್ರಿ 10 ಗಂಟೆಗೆ ಅವುಗಳನ್ನು ಸ್ಥಗಿತಗೊಳಿಸಬೇಕು. ವಾಣಿಜ್ಯ ಪ್ರದೇಶದಲ್ಲಿ 65 ಡೆಸಿಬಲ್, ವಾಸಸ್ಥಳದಲ್ಲಿ 55 ಡೆಸಿಬಲ್ ಹಾಗೂ ನಿಶ್ಯಬ್ದ ವಲಯದಲ್ಲಿ 50 ಡೆಸಿಬಲ್ಗಿಂತ ಹೆಚ್ಚಿನ ಶಬ್ದ ಉಂಟುಮಾಡುವಂತಿಲ್ಲ ಎಂದು ಪೊಲೀಸರು ಸೂಚಿಸಿದ್ದಾರೆ








